ಮರ್ಕಝ್‌ ನಾಲೆಜ್‌ ಸಿಟಿಗೆ ಭೇಟಿ ನೀಡಿದ ಮಂಗಳೂರಿನ ಗಣ್ಯರ ನಿಯೋಗ

Update: 2021-04-05 07:05 GMT

ಕೋಝಿಕ್ಕೋಡ್: ಮಂಗಳೂರಿನ ಉದ್ಯಮಿಗಳು, ಶಿಕ್ಷಣ ತಜ್ಞರು, ರಾಜಕಾರಣಿಗಳು ಮತ್ತು ವೃತ್ತಿಪರರನ್ನೊಳಗೊಂಡ 60 ಮಂದಿಯ ನಿಯೋಗವೊಂದು ಕೇರಳದ ಕ್ಯಾಲಿಕಟ್ ನಲ್ಲಿರುವ ಮರ್ಕಝ್‌ ನಾಲೆಜ್‌ ಸಿಟಿಗೆ ಭೇಟಿ ನೀಡಿತು.‌

ವಿಶಾಲವಾದ ಮರ್ಕಝ್‌ ನಾಲೆಜ್‌ ಸಿಟಿಯ ನಿರ್ಮಾಣ ಕಾರ್ಯವು ಭಾರತದ ಗ್ರ್ಯಾಂಡ್‌ ಮುಫ್ತಿ ಎ.ಪಿ ಅಬೂಬಕರ್‌ ಮುಸ್ಲಿಯಾರ್‌ ಕಾಂತಪುರಂರವರ ನೇತೃತ್ವದಲ್ಲಿ 2012ರಲ್ಲಿ ಪ್ರಾರಂಭಗೊಂಡಿದೆ. ಇದೀಗ ಎಂಟು ವರ್ಷಗಳ ಬಳಿಕ ಮರ್ಕಝ್‌ ನಾಲೆಜ್‌ ಸಿಟಿಯು ಭಾರತದಲ್ಲಿಯೇ ಅತಿದೊಡ್ಡ ಸಮಗ್ರ ನಗರವಾಗಿ ರೂಪುಗೊಳ್ಳುತ್ತಿದ್ದು, ಪ್ರಮುಖವಾಗಿ ಶಿಕ್ಷಣವನ್ನು ಉತ್ತೇಜಿಸುವ ಗುರಿ ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ. 

ಇಲ್ಲಿ ವೈವಿಧ್ಯಮಯ ಶಿಕ್ಷಣ ಸೌಲಭ್ಯಗಳನ್ನು ಪಡೆಯಬಹುದಾಗಿದ್ದು, ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಶಿಕ್ಷಣ, ಆಧುನಿಕ ತಂತ್ರಜ್ಞಾನಗಳ ಕುರಿತಾದ ಅಧ್ಯಯನಗಳು, ವೃತ್ತಿ ಆಧಾರಿತ ಅಧ್ಯಯನ ಸೌಲಭ್ಯಗಳಿವೆ. ಕಾನೂನು ಕಾಲೇಜು, ಯುನಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಗ್ಲೋಬಲ್‌ ಸ್ಕೂಲ್‌, ಕೋಚಿಂಗ್‌ ಸೆಂಟರ್‌ ಮುಂತಾದವುಗಳು ಸದ್ಯ ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲದೇ ಟೈಗ್ರಿಸ್‌ ವೆಲ್ನೆಸ್‌ ಸೆಂಟರ್‌, ಫೆಝಿನ್‌ ಸ್ಟಾರ್‌ ಹೋಟೆಲ್‌, ಎಕ್ಸಿಬಿಷನ್‌ ಸೆಂಟರ್‌, ತ್ವೈಬಾ ಗಾರ್ಡನ್‌ ರೆಸಿಡೆನ್ಶಿಯಲ್‌ ವಿಲೇಜ್‌ ಪ್ರಸ್ತುತ ಮರ್ಕಝ್‌ ನಾಲೆಡ್ಜ್‌ ಸಿಟಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಸಾಂಸ್ಕೃತಿಕ ಕೇಂದ್ರವು ಮರ್ಕಝ್‌ ನಾಲೆಜ್‌ ಸಿಟಿಯ ಮಹತ್ವದ ಯೋಜನೆಯಾಗಿದೆ. ಇದೊಂದು ಅದ್ಭುತ ವಾಸ್ತುಶಿಲ್ಪದ ತುಣುಕಾಗಿದ್ದು, ಹಿಂದಿನ ಕಾಲದ ಭಾರತೀಯ ಸಾಂಸ್ಕೃತಿಕ ರಾಜಧಾನಿಯ ಮೆರುಗನ್ನು ನೀಡುತ್ತದೆ. ಈ ಕಟ್ಟಡ ಸಂಕೀರ್ಣವು ಮಸೀದಿ, ಪಾರಂಪರಿಕ ವಸ್ತು ಸಂಗ್ರಹಾಲಯ, ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರವನ್ನೊಳಗೊಳ್ಳಲಿದೆ. ಸೂಕ್‌ ವ್ಯವಸ್ಥೆಯು ಹೆಚ್ಚು ಪ್ರಾಯೋಗಿಕ ಮತ್ತು ಇಸ್ಲಾಮಿಕ್‌ ಅರ್ಥ ವ್ಯವಸ್ಥೆಗೆ ಮಾದರಿಯಾಗಿ ರೂಪುಗೊಂಡಿದೆ ಎಂದು ಪ್ರಕಟನೆಯಲ್ಲಿ ಉಲ್ಲೇಖಿಸಲಾಗಿದೆ.

ಮರ್ಕಝ್‌ ನಾಲೆಜ್‌ ಸಿಟಿ ಯೋಜನೆಯ ಸಿದ್ಧಾಂತ ಮತ್ತು ವಿಚಾರಧಾರೆಗಳ ಕುರಿತು ಸಂಸ್ಥೆಯ ಅಧ್ಯಕ್ಷ ಎ.ಪಿ ಅಬೂಬಕರ್‌ ಮುಸ್ಲಿಯಾರ್‌ ಕಾಂತಪುರಂ ವಿವರಿಸಿದರು. ಭವಿಷ್ಯದ ಯೋಜನೆಗಳ ಕುರಿತಾದಂತೆ ಸಂಸ್ಥೆಯ ಎಮ್.ಡಿ ಡಾ. ಮುಹಮ್ಮದ್‌ ಅಬ್ದುಲ್‌ ಹಕೀಮ್‌ ಅಲ್‌ ಕಂದಿ ರವರು ಪ್ರಸ್ತುತಪಡಿಸಿದರು. ಸಂಸ್ಥೆಯ ಸಾಮಾಜಿಕ ಬದ್ಧತೆಗಳ ಕುರಿತಾದಂತೆ ಸಿಇಒ ಡಾ. ಅಬ್ದುಲ್‌ ಸಲಾಮ್‌ ವಿವರಿಸಿದರು.

ಮರ್ಕಝ್‌ ನಾಲೆಜ್‌ ಸಿಟಿಯಿಂದ ಪ್ರೇರಣೆ ಪಡೆದು ಮಂಗಳೂರಿನಲ್ಲೂ ಇಂತಹಾ ನಗರವೊಂದನ್ನು ಸ್ಥಾಪಿಸುವ ಕುರಿತಾದಂತೆ ನಿಯೋಗವು ಈ ಸಂದರ್ಭದಲ್ಲಿ ಚರ್ಚಿಸಿದೆ ಎಂದು ಪ್ರಕಟನೆ ತಿಳಿಸಿದೆ.

ನಿಯೋಗದ ನೇತೃತ್ವವನ್ನು ಮುಮ್ತಾಝ್‌ ಅಲಿ ಕೃಷ್ಣಾಪುರ, ಶಾಕಿರ್‌ ಹೈಸಮ್‌ ಮಂಗಳೂರು, ಬಾದುಷಾ ಸಖಾಫಿ, ತನ್ವೀರ್‌ ಅಡ್ವಕೇಟ್‌, ಹಬೀಬ್‌ ಕೋಯಾ, ಶಮೀನ್‌ ಹಾಗೂ ಶಿಹಾಬುದ್ದೀನ್‌ ಸಖಾಫಿ ವಹಿಸಿದ್ದರು. ಮಂಗಳೂರಿನಿಂದ ಕ್ಯಾಲಿಕಟ್‌ ಗೆ ಬಾಡಿಗೆ ವಿಮಾನದ ಮೂಲಕ ಪ್ರಯಾಣಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News