×
Ad

​ಕರಾವಳಿಯಲ್ಲಿ ಈಸ್ಟರ್ ಹಬ್ಬ ಆಚರಣೆ

Update: 2021-04-04 22:41 IST

ಮಂಗಳೂರು, ಎ.4: ಕರಾವಳಿಯಲ್ಲಿ ಕ್ರೈಸ್ತರು ಭಕ್ತಿ ಭಾವ, ಶ್ರದ್ಧೆ, ಸಂಭ್ರಮದಿಂದ ಈಸ್ಟರ್ ಹಬ್ಬವನ್ನು ಆಚರಿಸಿದರು. ಕರಾವಳಿಯ ಎಲ್ಲ ಚರ್ಚ್‌ಗಳಲ್ಲಿ ಈಸ್ಟರ್ ಹಬ್ಬದ ವಿಶೇಷ ಬಲಿಪೂಜೆಗಳು ರವಿವಾರ ಬೆಳಗ್ಗೆ ನಡೆಯಿತು.

ಮಂಗಳೂರು ಧರ್ಮಪ್ರಾಂತದ ಬಿಷಪ್ ಡಾ.ಪೀಟರ್ ಪಾವ್ಲ್  ಸಲ್ಡಾನ ಪುತ್ತೂರಿನ ನಿಡ್ಪಳ್ಳಿಯ ಚರ್ಚ್‌ನಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿದರು. ಪ್ರತಿ ಬಾರಿಯು ನಗರ ಕೇಂದ್ರೀಕೃತ ಚರ್ಚ್‌ಗಳಲ್ಲಿ ಅವರು ಬಲಿಪೂಜೆ ನಡೆಸುತ್ತಿದ್ದರು. ಇದೇ ಮೊದಲ ಬಾರಿಗೆ ಅವರು ಈಸ್ಟರ್ ಹಬ್ಬದ ಬಲಿಪೂಜೆಯನ್ನು ಗ್ರಾಮಾಂತರ ಪ್ರದೇಶದಲ್ಲಿ ನೆರವೇರಿಸಿ ಗಮನ ಸೆಳೆದರು.

ಏಸು ಕ್ರಿಸ್ತರು ಪುನರುತ್ಥಾನದ ಸ್ಮರಣೆಯ ಭಾಗವಾಗಿ ಕ್ರೈಸ್ತರು ಈಸ್ಟರ್ ಹಬ್ಬವನ್ನು ಆಚರಣೆ ಮಾಡುತ್ತಾರೆ. ಏಸುಕ್ರಿಸ್ತರು ಮರಣ ಹೊಂದಿದ ಮೂರು ದಿನಗಳ ಬಳಿಕ ಪುನರುತ್ಥಾನಗೊಳ್ಳುತ್ತಾರೆ ಎನ್ನುವ ಕ್ರೈಸ್ತರ ವಿಶ್ವಾಸದ ಬುನಾದಿಯೇ ಈ ಹಬ್ಬದ ತಿರುಳಾಗಿದೆ. ನಲವತ್ತು ದಿನಗಳ ಕಾಲದ ಕ್ರೈಸ್ತರ ತಪಸ್ಸು ಕಾಲದ ಕೊನೆಯ ವಾರದಲ್ಲಿ ಪವಿತ್ರ ವಾರವನ್ನು ಆಚರಿಸಲಾಗುತ್ತದೆ. ಪವಿತ್ರ ಗುರುವಾರ, ಶುಭ ಶುಕ್ರವಾರ, ಈಸ್ಟರ್ ಜಾಗರಣೆ ಕೊನೆಗೆ ಈಸ್ಟರ್ ಹಬ್ಬದ ಆಚರಣೆ ಇದರಲ್ಲಿ ಕಾಣಿಸಿಕೊಳ್ಳುತ್ತದೆ.

ಏಸುಕ್ರಿಸ್ತರು ಪವಿತ್ರ ಭೋಜನದ ಬಳಿಕ ಹನ್ನೆರಡು ಮಂದಿ ಶಿಷ್ಯರ ಪಾದ ತೊಳೆಯುವ ಪವಿತ್ರ ಗುರುವಾರದ ಆಚರಣೆಯ ಬಳಿಕ ಶಿಲುಬೆಯಲ್ಲಿ ಮೃತ ಪಡುವ ಶುಭ ಶುಕ್ರವಾರ ಹಾಗೂ ಈಸ್ಟರ್ ಜಾಗರಣೆಯಲ್ಲಿ ಈಸ್ಟರ್ ಕ್ಯಾಂಡಲ್ ಹೊತ್ತಿಸುವ ಮೂಲಕ ಕತ್ತಲೆಯಿಂದ ಬೆಳಕಿನ ಕಡೆಗೆ ಏಸುವಿನ ಆಗಮನ ಜತೆಗೆ ರವಿವಾರ ಏಸುವಿನ ಪುನರುತ್ಥಾನದ ಹಬ್ಬ ಈಸ್ಟರ್ ಆಚರಣೆ ನಡೆಯುತ್ತದೆ. ಈಸ್ಟರ್ ಹಬ್ಬದಂದು ಆಶೀರ್ವದಿಸಿದ ಪವಿತ್ರ ನೀರನ್ನು ಭಕ್ತರಿಗೆ ನೀಡುವ ಧಾರ್ಮಿಕ ವಿಧಾನ ಸಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News