"ಯೋಧರ ಮೇಲೆ ದಾಳಿಯಂತಹ ಘಟನೆ ನಡೆದರೆ ಮಾತ್ರ ಬಿಜೆಪಿಗೆ 100ಕ್ಕಿಂತ ಹೆಚ್ಚು ಸ್ಥಾನದ ಸಾಧ್ಯತೆ"

Update: 2021-04-05 08:31 GMT

ಹೊಸದಿಲ್ಲಿ: ಛತ್ತೀಸ್ ಗಡದ ಬಿಜಾಪುರದಲ್ಲಿ ಮಾವೋವಾದಿಗಳು ನಡೆಸಿದ ದಾಳಿಯಲ್ಲಿ 22 ಮಂದಿ ಯೋಧರು ಮೃತಪಟ್ಟು, 31 ಮಂದಿ ಯೋಧರು ಗಾಯಗೊಂಡ ದುರಂತ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಇಂದು ಛತ್ತೀಸ್ ಗಢಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದು, ಯೋಧರ ಬಲಿದಾನ ವ್ಯರ್ಥವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 

ಈ ನಡುವೆ ಮಾರ್ಚ್ 3 ರಂದು  india today ಗೆ ನೀಡಿದ್ದ ಸಂದರ್ಶನದಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಹೇಳಿದ್ದ ಮಾತುಗಳು ಸಾಮಾಜಿಕ ತಾಣದಾದ್ಯಂತ ಚರ್ಚೆಗೊಳಗಾಗಿದೆ.

india today ವಾಹಿನಿಯ ರಾಹುಲ್ ಕವಲ್ ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಶಾಂತ್‌ ಕಿಶೋರ್‌, "ಪಶ್ಚಿಮ ಬಂಗಾಳದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಎರಡಂಕಿಯ ಮೇಲಿನ ಸೀಟುಗಳು ಅಂದರೆ 100 ಸೀಟು ಕೂಡಾ ಗಳಿಸಲು ಸಾಧ್ಯವಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದರು. ಹಾಗೊಂದು ವೇಳೆ ಆದರೆ ತಾನು ಚುನಾವಣಾ ಕಾರ್ಯತಂತ್ರಜ್ಞನಾಗಿ ಕೆಲಸ ಮಾಡುವುದನ್ನೇ ಬಿಟ್ಟು ಬಿಡುತ್ತೇನೆ ಎಂದೂ ಸವಾಲು ಹಾಕಿದ್ದರು. 

ಈ ವೇಳೆ ರಾಹುಲ್ ಕವಲ್ "ನಿಮ್ಮ ಈ 100 ಸೀಟುಗಳ ಸಮೀಕ್ಷೆಯು ತಲೆಕೆಳಗಾಗುವ ಸಾಧ್ಯತೆಯಿದೆಯೇ ಎಂದು ಪ್ರಶ್ನಿಸಿದಾಗ "ಒಂದೇ ಒಂದು ಸಾಧ್ಯತೆಯು ಫಲಿತಾಂಶವನ್ನು ಬದಲಿಸಬಹುದಾಗಿದೆ. ದುರದೃಷ್ಟವಶಾತ್ ಚುನಾವಣೆಯ ಸಂದರ್ಭದಲ್ಲಿ ದೇಶದ ಅರೆಸೇನಾ ಪಡೆಗಳ ಮೇಲೆ ಯಾವುದಾದರೊಂದು ದಾಳಿ ನಡೆದರೆ ಅದು ಬಿಜೆಪಿ ಗೆಲ್ಲುವ ಸೀಟುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅಲ್ಲದೇ ಬೇರೆ ಯಾವ ಕಾರಣಗಳಿಂದಲೂ ಬಿಜೆಪಿ 100ಕ್ಕಿಂತ ಹೆಚ್ಚು ಸೀಟುಗಳನ್ನು ಗಳಿಸುವ ಸಾಧ್ಯತೆ ಇಲ್ಲವೇ ಇಲ್ಲ" ಎಂದು ಸಂದರ್ಶನದಲ್ಲಿ  ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ. ಸಂದರ್ಶನದ ಯೂಟ್ಯೂಬ್ ಲಿಂಕ್ ಇಲ್ಲಿದೆ. ಅದರಲ್ಲಿ  29:11ನಿಮಿಷದಿಂದ 30 ನಿಮಿಷಗಳ ಅವಧಿಯಲ್ಲಿ ಈ ಪ್ರಶ್ನೋತ್ತರ ಇದೆ. 

ಈ  ಹೇಳಿಕೆ ನೀಡಿದ ಒಂದು ತಿಂಗಳಿನಲ್ಲೇ ಛತ್ತೀಸ್‌ ಗಢದಲ್ಲಿ ಮಾವೋವಾದಿಗಳು ನಡೆಸಿದ ದಾಳಿಯಲ್ಲಿ 22 ಮಂದಿ ಯೋಧರು ಮೃತಪಟ್ಟಿದ್ದು ಈ ಕುರಿತು ಸಾಮಾಜಿಕ ತಾಣದಾದ್ಯಂತ ಚರ್ಚೆ ನಡೆಯುತ್ತಿದೆ.  

ಈ ಕುರಿತಾದಂತೆ ಸಾಮಾಜಿಕ ಕಾರ್ಯಕರ್ತ ಕನ್ಹಯ್ಯಾ ಕುಮಾರ್‌ ಕೂಡ ಟ್ವೀಟ್‌ ಮಾಡಿದ್ದು, "ಗೃಹ ಸಚಿವರ ಪುತ್ರ ಬಿಸಿಸಿಐ ಕಾರ್ಯದರ್ಶಿಯಾಗಿದ್ದಾರೆ. ಸಾಮಾನ್ಯ ರೈತನ ಪುತ್ರ ಸೇನೆಯಲ್ಲಿ ಯೋಧನಾಗಿದ್ದಾನೆ. ಅದೆಷ್ಟು ಸಚಿವರ ಮಕ್ಕಳು ಸೇನೆಯಲ್ಲಿದ್ದಾರೆಂದು ಅಧಿಕಾರ ವರ್ಗದೊಂದಿಗೆ ಪ್ರಶ್ನಿಸಬೇಕು. ಹೇಡಿ ನಕ್ಸಲ್‌ ಗಳು ನಡೆಸಿದ ದಾಳಿಯಲ್ಲಿ ದೇಶದ ಸಾಮಾನ್ಯ ಜನರ ರಕ್ತ ಹರಿಯುತ್ತಿದೆ ಮತ್ತು 'ಕುರ್ಚಿಜೀವಿ ‌ʼ ಇದರ ಅನುಕೂಲ ಪಡೆಯುತ್ತಿದ್ದಾರೆ. ಈ ಷಡ್ಯಂತ್ರವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಯೋಧರಿಗೆ ಮತ್ತು ರೈತರಿಗೆ ನಮನಗಳು" ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಪೋಸ್ಟರ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News