ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ ಮುಖ್ ರಾಜೀನಾಮೆ

Update: 2021-04-05 10:05 GMT
photo: ani

ಮುಂಬೈ: ಮುಂಬೈನ  ಮಾಜಿ ಪೊಲೀಸ್ ಮುಖ್ಯಸ್ಥ ಪರಮ್‍ಬೀರ್ ಸಿಂಗ್ ಅವರ ಆರೋಪದ ಬಗ್ಗೆ 15 ದಿನಗಳೊಳಗೆ ಪ್ರಾಥಮಿಕ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಸಿಬಿಐಗೆ ಆದೇಶಿಸಿದ ಕೆಲವೇ ಗಂಟೆಗಳ ಬಳಿಕ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ನೈತಿಕ ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರ ಆರೋಪದ ಆಧಾರದ ಮೇಲೆ ಪೊಲೀಸ್ ವರ್ಗಾವಣೆ ಹಾಗೂ ಪೋಸ್ಟಿಂಗ್ ಗಳಲ್ಲಿ ದೇಶ್ ಮುಖ್ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸಿಂಗ್ ಅವರು ಹೈಕೋರ್ಟ್‍ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಿದ್ದರು.

ದೇಶ್ ಮುಖ್ ಅವರು ರಾಜೀನಾಮೆ ನೀಡಬೇಕೆಂಬ ವಿಪಕ್ಷ ಬಿಜೆಪಿಯ ಆಗ್ರಹವನ್ನು ತಿರಸ್ಕರಿಸುತ್ತಾ ಬಂದಿದ್ದು, ತಾನು ಏನೂ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

ಸಿಬಿಐ ಈಗ ತನಿಖೆ ಮಾಡಲು ಹೊರಟಿರುವುದರಿಂದ ಈಗ ನಾನು ಈ ಸ್ಥಾನದಲ್ಲಿರುವುದು ಸರಿಯಲ್ಲ ಎಂದು ಎನ್‍ಸಿಪಿ ಮುಖಂಡ ದೇಶ್‍ಮುಖ್ ಹೇಳಿದ್ದಾರೆ.

ದೇಶ್ ಮುಖ್ ವಿರುದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸುಲಿಗೆ ಹಾಗೂ ಅಕ್ರಮ ವರ್ಗಾವಣೆ ನಡೆಸುತ್ತಿದಾರೆ ಎಂದು ಆರೋಪಿಸಿ ತನಿಖೆ ನಡೆಸುವಂತೆ ಕೋರಿ ದೂರು ಸಲ್ಲಿಸಿದ ಬಳಿಕ ನನ್ನನ್ನು ಗುರಿಯಾಗಿಸಲಾಗಿದೆ ಎಂದು ಇತ್ತೀಚೆಗಷ್ಟೇ ಮುಂಬೈ ಪೊಲೀಸ್ ಮುಖ್ಯಸ್ಥ ಹುದ್ದೆಯನ್ನು ಕಳೆದುಕೊಂಡಿದ್ದ ಪರಮ್‍ಬೀರ್ ಹೈಕೋರ್ಟಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ದೇಶ್‍ಮುಖ್ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಬಯಸದ ಕಾರಣ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಅಂಗೀಕರಿಸುವಂತೆ ಸಿಎಂಗೆ ಕೋರಿದ್ದೇವೆ.  ಹೈಕೋರ್ಟ್ ಆದೇಶದ ಬಳಿಕಅನಿಲ್ ದೇಶ್ ಮುಖ್ ಅವರು ಪವಾರ್ ಜೀ ಹಾಗೂಪಕ್ಷದ ನಾಯಕರನ್ನು ಭೇಟಿಯಾಗಿ ತಾನು ಹುದ್ದೆಯಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದರು ಎಂದು ಎನ್ ಸಿಪಿ ವಕ್ತಾರ ನವಾಬ್ ಮಲಿಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News