×
Ad

ಕೋವಿಡ್ ತಪಾಸಣೆ, ಮಾರ್ಗಸೂಚಿ ಪಾಲನೆ ಕಡ್ಡಾಯ: ಉಡುಪಿ ಜಿಲ್ಲಾಧಿಕಾರಿ

Update: 2021-04-05 20:06 IST

ಉಡುಪಿ, ಎ.5: ಇತ್ತೀಚಿನ ದಿನಗಳಲ್ಲಿ ನೆರೆಯ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ದೃಢಪಟ್ಟ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬರುತ್ತಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆ ಗಳಲ್ಲಿ ಗುಂಪು ಗುಂಪಾಗಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಕೋವಿಡ್‌ನ ಎರಡನೇ ಅಲೆ ಕಂಡುಬರುವ ಆತಂಕ ಎದುರಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಇದಕ್ಕಾಗಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಚಟುವಟಿಕೆಗಳನ್ನು ತೀವ್ರಗೊಳಿಸಬೇಕಾಗಿದ್ದು, ಈ ಹಿನ್ನ್ನೆಲೆಯಲ್ಲಿ ಸರಕಾರಿ ಆದೇಶಗಳಂತೆ ಸಮುದಾಯದಲ್ಲಿ ಸರ್ವೇಕ್ಷಣಾ ಕಾರ್ಯವನ್ನು ಚುರುಕುಗೊಳಿಸಬೇಕಾಗಿದೆ. ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡ ಬೇಕಾಗಿರುತ್ತದೆ. ಅದರಂತೆ ಸಮುದಾಯದ ಕೆಲವು ನಿರ್ದಿಷ್ಟ ವರ್ಗಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಂಡು ಯಾದೃಚ್ಛಿಕವಾಗಿ (ರ್ಯಾಂಡಮ್) ತಪಾಸಣೆಗೆ ಒಳಪಡಿಸಿ ಸ್ವಾಬ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಬೇಕಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ಕೋವಿಡ್ ರೆಗ್ಯೂಲೇಶನ್-2020 ಅಧಿಸೂಚನೆಯನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲೆಯಲ್ಲಿ ಕೆಲವು ಉಪಕ್ರಮ ಗಳನ್ನು ಕೈಗೊಂಡಿರುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿರುವ ಎಲ್ಲಾ ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಬಟ್ಟೆ ಮಳಿಗೆಗಳು, ಎಲೆಕ್ಟ್ರಾನಿಕ್ ಉಪಕರಣಗಳ ಸ್ಟೋರ್‌ಗಳು, ಅಂಗಡಿ ಮುಂಗಟ್ಟುಗಳು, ರೆಮೊಟೋ, ಸ್ವಿಗ್ಗಿಯಂಥ ಎಲ್ಲಾ ಆಹಾರ ವಿತರಕ ಸಂಸ್ಥೆಗಳು, ಹೋಟೇಲ್ ಮತ್ತು ರೆಸ್ಟೋರೆಂಟ್ ಗಳು, ಸಿನಿಮಾ ಮಂದಿರ ದವರು ತಮ್ಮ ವ್ಯಾಪ್ತಿಗೆ ಸೇರಿದ ತಾಲೂಕು ಆರೋಗ್ಯಾಧಿಕಾರಿ (ಉಡುಪಿ:0820 2526428, ಕುಂದಾಪುರ :08254-230730, ಕಾರ್ಕಳ:08258 -231788)ಯವರನ್ನು ಸಂಪರ್ಕಿಸಿ ದಿನಾಂಕವನ್ನು ನಿಗದಿಪಡಿಸಿಕೊಂಡು ತಮ್ಮ ಸಂಸ್ಥೆಯ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಕೋವಿಡ್-19 ತಪಾಸಣೆ ಮಾಡಿಸಬೇಕು. ತಮ್ಮ ಸಂಸ್ಧೆಗಳ ಪ್ರವೇಶ ದ್ವಾರಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್‌ಗಳನ್ನು ಇರಿಸ ಬೇಕು. ಸಂಸ್ಥೆ ಪ್ರವೇಶಿಸುವ ಮೊದಲು ಎಲ್ಲರೂ ಸ್ಯಾನಿಟೈಸರನ್ನು ಉಪಯೋಗಿಸಬೇಕು. ಮಾಸ್ಕ್ ಧರಿಸುವುದು, ಸುರಕ್ಷತಾ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ ಅಥವಾ ಆಗಾಗ್ಗೆ ಸಾಬೂನಿನಿಂದ ಕೈತೊಳೆದುಕೊಳ್ಳುವುದು ಮುಂತಾದ ಕೋವಿಡ್ ಮಾರ್ಗಸೂಚಿ ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಅಲ್ಲದೇ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊರಡಿಸಿದ ಎಲ್ಲಾ ಮಾರ್ಗಸೂಚಿ/ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ಯನ್ವಯ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಂಬಂಧಿಸಿದ ಸಂಸ್ದೆಗಳ ಪರವಾನಿಗೆಯನ್ನು ಕೋವಿಡ್-19 ಮುಕ್ತಾಯವಾಗುವ ತನಕ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News