ಉಡುಪಿ ಜಿಲ್ಲೆಯಲ್ಲಿ ಸೋಮವಾರ 59 ಮಂದಿಗೆ ಕೊರೋನ ಪಾಸಿಟಿವ್
ಉಡುಪಿ, ಎ. 5: ಸೋಮವಾರ ಜಿಲ್ಲೆಯಲ್ಲಿ ಹೊಸದಾಗಿ 59 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇವರಲ್ಲಿ ಮಣಿಪಾಲ ಎಂಐಟಿಯ ಇಬ್ಬರು, ಬಫರ್ ವಲಯದ 6 ಮಂದಿ, ಹಕ್ಲಾಡಿ ಪ್ರೌಢ ಶಾಲೆಯ 7 ಮಂದಿ, ಕೊಲ್ಲೂರು ಪ್ರೌಢ ಶಾಲೆ, ಶಂಕರನಾರಾಯಣ ಪ.ಪೂ.ಕಾಲೇಜಿನ ತಲಾ ಇಬ್ಬರು ಹಾಗೂ ಗೋಪಾಡಿಯ ಬಿಸಿಎಂ ಹಾಸ್ಟೆಲ್‌ನ 12 ಮಂದಿ ಸೇರಿದ್ದಾರೆ.
ದಿನದಲ್ಲಿ 53 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ, ಜಿಲ್ಲೆಯಲ್ಲಿ ಕೋವಿಡ್‌ಗೆ ಸಕ್ರಿಯರಾಗಿರುವವರ ಸಂಖ್ಯೆ 396 ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದ 59 ಮಂದಿಯಲ್ಲಿ 27 ಮಂದಿ ಪುರುಷರು ಹಾಗೂ 32 ಮಂದಿ ಮಹಿಳೆಯರು. ಇವರಲ್ಲಿ 18 ಮಂದಿ ಉಡುಪಿ ತಾಲೂಕಿನವರಾದರೆ 35 ಮಂದಿ ಕುಂದಾಪುರ ತಾಲೂಕು ಹಾಗೂ ಆರು ಮಂದಿ ಕಾರ್ಕಳ ತಾಲೂಕಿನವರು. ಕಾರ್ಕಳದಲ್ಲಿ ಮುಂಬೈಯಿಂದ ಬಂದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಡಾ.ಸೂಡ ತಿಳಿಸಿದ್ದಾರೆ.
ಕುಂದಾಪುರ ತಾಲೂಕಿನ ಹಕ್ಲಾಡಿಯಲ್ಲಿ ಕಳೆದ ವಾರ 12 ಮಂದಿ ಪಾಸಿಟಿವ್ ಬಂದಿದ್ದು, ಇಂದು ಮತ್ತೆ 7 ಮಂದಿ ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದೇ ರೀತಿ ಕೊಲ್ಲೂರು ಪ್ರೌಢ ಶಾಲೆಯಲ್ಲಿ ಇಬ್ಬರಲ್ಲಿ ಶಂಕರನಾರಾಯಣ ಪ.ಪೂ.ಕಾಲೇಜಿನ ಇಬ್ಬರಲ್ಲೂ ಸೋಂಕು ಕಂಡುಬಂದಿದೆ. ಗೋಪಾಡಿಯಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ಮೊದಲು ಇಬ್ಬರಲ್ಲಿ ಸೋಂಕು ಕಂಡುಬಂದಿದ್ದರೆ, ಇಂದು 12 ಮಂದಿ ಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಎಂಐಟಿಯ ಇಬ್ಬರು, ಎಂಐಟಿ ಬಫರ್ ವಲಯದಲ್ಲಿದ್ದ ಆರು ಮಂದಿಯೂ ಇಂದು ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ.
ರವಿವಾರ 53 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 24,986ಕ್ಕೇರಿದೆ. ರವಿವಾರ ಜಿಲ್ಲೆಯ 1548 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 59 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 25,574 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,29,988 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ನಿಂದ ಸತ್ತವರ ಸಂಖ್ಯೆ 192 ಆಗಿದೆ.