ಮಂಗಳೂರು: ಡಾ. ಬಾಬು ಜಗಜೀವನರಾಂ ಜನ್ಮದಿನಾಚರಣೆ
ಮಂಗಳೂರು, ಎ.5: ದ.ಕ. ಜಿಲ್ಲಾಡಳಿತ, ಜಿಪಂ, ಮಂಗಳೂರು ಮನಪಾ ಹಾಗೂ ಸಮಾಜಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಹಸಿರು ಕ್ರಾಂತಿಯರ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 114 ನೇ ಜನ್ಮದಿನಾಚರಣೆ ಕಾರ್ಯಕ್ರಮವು ಸೋಮವಾರ ದ.ಕ.ಜಿಪಂ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ದಕ್ಷ ಹಾಗೂ ದೂರದರ್ಶಿತ್ವದ ಆಡಳಿತಗಾರರಾಗಿದ್ದ ಬಾಬು ಜಗಜೀವನರಾಂ ಶೋಷಿತವರ್ಗಕ್ಕೆ ಸ್ವಾಭಿಮಾನಿ ಬದುಕು ಕಟ್ಟಿಕೊಡಲು ಶ್ರಮಿಸಿದ ಮೇಧಾವಿ. ಅವರ ಬದುಕು, ಸಾಧನೆ ಹಾಗೂ ಆದರ್ಶ ನಮಗೆಲ್ಲರಿಗೂ ಪ್ರೇರಣೆಯಾಗಲಿ ಎಂದರು.
ಡಾ. ಬಾಬು ಜಗಜೀವನರಾಂ ಅವರ 114 ನೇ ಜನ್ಮದಿನಾಚರಣೆ ಸಂದರ್ಭ ನಗರದ ಕೊಡಿಯಾಲ್‌ಬೈಲ್‌ನ ಪಿವಿಎಸ್ ವೃತ್ತದ ಬಳಿ 9.85 ಕೋ.ರೂ. ವೆಚ್ಚದಲ್ಲಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ (ಪ.ಜಾತಿ)ನಿಲಯದ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ವಿದ್ಯಾರ್ಥಿನಿಲಯ ಸುಸಜ್ಚಿತವಾಗಿ ನಿರ್ಮಾಣಗೊಳ್ಳಲಿದೆ ಎಂದು ವೇದವ್ಯಾಸ ಕಾಮತ್ ನುಡಿದರು.
ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ , ಜಿಪಂ ಸಿಇಒ ಡಾ. ಕುಮಾರ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿದರು. ಕೊಣಾಜೆ ಮಂಗಳ ಗಂಗೋತ್ರಿಯ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ನಾಯ್ಕಾ ವಿಶೇಷ ಉಪನ್ಯಾಸ ನೀಡಿದರು.
ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಉಪಮೇಯರ್ ಸುಮಂಗಳ ರಾವ್ ಅತಿಥಿಯಾಗಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ.ಯೋಗೀಶ್ ಎಸ್.ಬಿ. ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.