ಆಕಿಫ್ ಕೊಲೆ ಪೂರ್ವ ಯೋಜಿತ ಕೃತ್ಯ, ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು: ಹನೀಫ್

Update: 2021-04-06 08:50 GMT
ಆಕಿಫ್

ಉಳ್ಳಾಲ: ತನ್ನ ಪುತ್ರ ಆಕಿಫ್ ಕೊಲೆ ಪೂರ್ವ ಯೋಜಿತ ಕೃತ್ಯವೇ ಹೊರತು ಯಾವುದೇ ಪಬ್ ಜಿಯಂತಹ ಆನ್ ಲೈನ್ ಗೇಮ್ ನಿಂದ ನಡೆದಿದ್ದಲ್ಲ, ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು, ಅಂತಹ ಕೃತ್ಯ ಆರೋಪಿ ಎಸಗಿದ್ದಾನೆ ಎಂದು ಆಕಿಫ್ ತಂದೆ ಹನೀಫ್ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.

ಆಕಿಫ್ ಮದ್ರಸ ತರಗತಿ ಮುಗಿಸಿ ಮನೆಗೆ ಬಂದವ ರಾತ್ರಿ 8.40ಕ್ಕೆ ಮನೆಯಿಂದ ಹೊರಟಿದ್ದಾನೆ. ಹೋಗುವಾಗ ಜ್ಯೂಸ್ ಕುಡಿಯಲು 20 ರೂ. ಕೊಡುವಂತೆ ತಾಯಿಯಲ್ಲಿ ಕೇಳಿದ್ದ. ತಾಯಿ 80 ರೂ. ನೀಡಿ ಬರುವಾಗ ಎರಡು ಕೆಜಿ ಅಕ್ಕಿ ತರಲು ಹೇಳಿದ್ದರು. ಮಗ ಮನೆಗೆ ಬಾರದಿದ್ದುದರಿಂದ ತಾಯಿ 9.05ಕ್ಕೆ  ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಆರೋಪಿಗೆ ಕರೆ ಮಾಡಿ ವಿಚಾರಿಸಿದಾಗ ಆತ ನನ್ನ ಬಳಿ ಬರಲಿಲ್ಲ ಎಂದು ತಿಳಿಸಿ ಪ್ರಕರಣ ಮುಚ್ಚಿದ್ದ. ಈ ಸಮಯದಲ್ಲಿ ನಾನು ಮಂಗಳೂರುನಲ್ಲಿ ಇದ್ದೆ. ಆಕೆ ನನಗೆ ಕರೆ ಮಾಡಿದಾಗ ನಾನು ಗಂಭೀರವಾಗಿ ತೆಗೆದು ಕೊಳ್ಳಲಿಲ್ಲ. ರಾತ್ರಿ10.30ಕ್ಕೆ ಬಂದು ಮಗನಿಗಾಗಿ ಹುಡುಕಾಟ ನಡೆಸಿದೆ. ಆರೋಪಿಯ ಮನೆಗೆ ಹೋಗಿ ವಿಚಾರಿಸಿದಾಗ ಅವರು ಏನು ಗೊತ್ತಿಲ್ಲದಂತೆ ನಟನೆ ಮಾಡಿದ್ದಾರೆ ಎಂದು ಆಕಿಫ್ ತಂದೆ ಹನೀಫ್ ವಿವರಿಸಿದ್ದಾರೆ.

ಮಗ ಬಾರದ ಲೋಕಕ್ಕೆ ಹೋಗಿದ್ದನ್ನು ನನಗೆ ಅರಗಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ಘಟನೆಯ ಹಿಂದೆ ಆರೋಪಿಯ ಪೊಷಕರು ಸಹಕಾರ ನೀಡಿದ್ದಾರೆ ಎಂದು ಆರೋಪಿಸಿದರು. ರಾತ್ರಿ ಹುಡುಕಾಟ ನಡೆಸಿದಾಗ ಪುತ್ರನ ಮೃತದೇಹ ಸಿಕ್ಕಿರಲಿಲ್ಲ. ರಾತ್ರಿ ಮೃತ ದೇಹ ದೊರೆತಿದ್ದರೆ ಏನಾದರೊಂದು ಘಟನೆ ಆ ಸಂದರ್ಭದಲ್ಲಿ ನಡೆಯುವ ಸಾಧ್ಯತೆ ಇತ್ತು. ಬೆಳಗ್ಗೆ ಮೃತದೇಹ ಸಿಕ್ಕಿದ ವೇಳೆ ಕಮಿಷನರ್ ಶಶಿಕುಮಾರ್ ನ್ಯಾಯ ಒದಗಿಸಿ ಕೊಡುವ ಭರವಸೆ ನೀಡಿದ ಕಾರಣ ಎಲ್ಲರೂ ತಣ್ಣಗಾದರು. ಒಟ್ಟಿನಲ್ಲಿ ಇದು ಪೂರ್ವ ಯೋಜಿತ ಕೃತ್ಯ. ಆಟ ಆಡುವಷ್ಟು ಸಮಯ ಅವರಿಗೆ ಸಿಗಲಿಲ್ಲ. ಗೇಮ್ ನಾ ದ್ವೇಷದಿಂದ ಕೊಂದದ್ದೂ ಅಲ್ಲ. ಆರೋಪಿಗೂ ನನ್ನ ಮಗನಿಗೂ ಕಳೆದ ಮೂರು ತಿಂಗಳಿಂದ ಪರಿಚಯ. ಜತೆಯಾಗಿ ಇದ್ದರು. ಆರೋಪಿ ಉತ್ತರ ಪ್ರದೇಶ ಮೂಲದವ. ಆತ ನನಗೆ ಸಂಘ ಪರಿವಾರದ ಸಂಪರ್ಕ ಇದೆ ಎಂದು ಹೇಳುತ್ತಿದ್ದ. ಆದರೆ ಬೇರೆ ದುರುದ್ದೇಶದಿಂದ ಮಗ ಆಕಿಫ್ ನನ್ನು  ಕೊಲೆ ಮಾಡಿದ್ದಾನೆ. ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು. ಪ್ರಕರಣ ಮುಚ್ಚಿಡಲು ಯತ್ನಿಸಿದ ಪೋಷಕರ ವಿರುದ್ಧವೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಕಿಫ್ ತಂದೆ ಹನೀಫ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News