×
Ad

ರಾಜ್ಯ ಸರಕಾರದ ನೆರವಿಗೆ ಖಾಸಗಿ ಬಸ್ ಮಾಲಕರ ಒಕ್ಕೂಟ ನಿರ್ಧಾರ

Update: 2021-04-06 18:51 IST
ಕುಯಿಲಾಡಿ ಸುರೇಶ್ ನಾಯಕ್

ಉಡುಪಿ, ಎ.6: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವಿವಿಧ ಕಾರ್ಮಿಕ ಸಂಘಟನೆಗಳು ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಎ.7ರಿಂದ ನಡೆಸಲುದ್ದೇಶಿಸಿರುವ ಅನಿರ್ಧಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟ ಸರಕಾರದ ನೆರವಿಗೆ ಧಾವಿಸಿದ್ದು, ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಘೋಷಿಸಿದೆ.

ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟದ ಪರವಾಗಿ ಉಡುಪಿಯಲ್ಲಿಂದು ತುರ್ತು ಪತ್ರಿಕಾಗೋಷ್ಠಿಯನ್ನು ಕರೆದು ಮಾತನಾಡಿದ ಒಕ್ಕೂಟದ ಖಜಾಂಚಿ ಹಾಗೂ ಉಡುಪಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಸರಕಾರದ ಕೋರಿಕೆಯನ್ನು ತಿರಸ್ಕರಿಸಿ ಕೆಎಸ್ಸಾರ್ಟಿಸಿ ನೌಕರರು ನಾಳೆಯಿಂದ ಮುಷ್ಕರಕ್ಕಿಳಿದರೆ, ಸರಕಾರ ಕೋರುವ ಎಲ್ಲಾ ಸಹಾಯವನ್ನು ಒಕ್ಕೂಟ ಮಾಡಲು ಸಿದ್ಧವಿದೆ ಎಂದರು.

ರಾಜ್ಯದಲ್ಲಿ ಸುಮಾರು 8000 ಸ್ಟೇಜ್ ಕ್ಯಾರೇಜ್ (ಬಸ್‌ಗಳು), 20,000ದಷ್ಟು ಮ್ಯಾಕ್ಸಿ ಕ್ಯಾಬ್, 4,300ದಷ್ಟು ಕಾಂಟ್ರಾಕ್ಟ್ ಕ್ಯಾರೇಜ್, 3ರಿಂದ 4000ದಷ್ಟು ರಾತ್ರಿ ಬಸ್‌ಗಳಿದ್ದು, ಅವುಗಳೆಲ್ಲವೂ ನಾಳೆಯಿಂದ ರಸ್ತೆಗಿಳಿಯಲಿವೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ, ತೊಂದರೆಗಳಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ಕಾರ್ಮಿಕ ಸಂಘಟನೆಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಸರಕಾರ ಈಗಾಗಲೇ ಅವರ 9 ಬೇಡಿಕೆಗಳ ಪೈಕಿ ಎಂಟನ್ನು ಈಡೇರಿಸಲು ಒಪ್ಪಿಕೊಂಡಿವೆ. ವೇತನ ಪರಿಷ್ಕರಣೆ ಹಾಗೂ ಸರಕಾರಿ ನೌಕರರಾಗಿ ಪರಿಗಣಿಸುವ ಬೇಡಿಕೆಯ ಕುರಿತು ಇನ್ನೂ ಚರ್ಚೆಗೆ ಅವಕಾಶವಿದೆ. ಕೆಎಸ್ಸಾರ್ಟಿಸಿ ನೌಕರರ ಸಂಘಟನೆಗಳು ಮುಷ್ಕರಕ್ಕೆ ಖಾಸಗಿ ಬಸ್‌ಗಳ ಬೆಂಬಲ ಕೋರಿದ್ದರೂ ನಾವು ಅದಕ್ಕೆ ಸಮ್ಮತಿಸಿಲ್ಲ ಎಂದು ಸುರೇಶ್ ನಾಯಕ್ ತಿಳಿಸಿದರು.

ಖಾಸಗಿ ಬಸ್ ಮಾಲಕರು, ನೌಕರರು ಬೇಡಿಕೆಗಳ ಈಡೇರಿಕೆಗಾಗಿ ಈವರೆಗೆ ಮುಷ್ಕರ ನಡೆಸಿಲ್ಲ. ಅನಿವಾರ್ಯ ಕಾರಣಗಳಿಂದ ಹಾಗೂ ಬೇರೆ ಬೇರೆ ಸಂಘಟನೆಗಳು ಮುಷ್ಕರಕ್ಕೆ ಕರೆ ಕೊಟ್ಟಾಗ ನಾವು ಬೇರೆ ದಾರಿ ಕಾಣದೇ ಬಸ್‌ಗಳನ್ನು ನಿಲ್ಲಿಸಲೇಬೇಕಾದ ಸಂದರ್ಭ ಬಂದಾಗ ಬಂದ್ ಮಾಡಿದ್ದೇವೆ ಎಂದರು.

ಸಾರಿಗೆ ವ್ಯವಸ್ಥೆ ಎಂಬುದು ಸಾರ್ವಜನಿಕರ ದೈನಂದಿನ ಅಗತ್ಯತೆಗಳಲ್ಲಿ ಒಂದಾಗಿದೆ. ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಏಕಸ್ವಾಮ್ಯವನ್ನು ಹೊಂದಿ ರುವ ಕೆಎಸ್ಸಾರ್ಟಿಸಿ ಬಸ್‌ಗಳ ನೌಕರರು ಮುಷ್ಕರಕ್ಕಿಳಿದರೆ ಅದರಿಂದ ಜನಸಾಮಾನ್ಯರು ತೀವ್ರ ತೊಂದರೆಗೆ ಸಿಲುಕುತ್ತಾರೆ. ಬಹುಸಂಖ್ಯಾತ ಜನರು ಇಂದು ಉದ್ಯೋಗ ಹಾಗೂ ಇತರ ಕೆಲಸಗಳಿಗೆ ಬಸ್‌ಗಳನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಜನರನ್ನು ತೊಂದರೆ ಸಿಲುಕಿಸಿ ಮುಷ್ಕರ ನಡೆಸುವ ಬದಲು ಸರಕಾರದೊಂದಿಗೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸಿಕೊಳ್ಳಿ ಎಂಬುದು ಸಾರಿಗೆ ನೌಕರರಿಗೆ ನಮ್ಮ ಮನವಿಯಾಗಿದೆ ಎಂದರು.

ನಾಳಿನ ಮುಷ್ಕರಕ್ಕೆ ಸಂಬಂಧಿಸಿದಂತೆ ಸರಕಾರ ಈಗಾಗಲೇ ಖಾಸಗಿ ಬಸ್ ಮಾಲಕ ರೊಂದಿಗೆ ಮಾತುಕತೆ ನಡೆಸಿದೆ. ಎಲ್ಲಾ ನೆರವನ್ನು ನೀಡುವ ಭರವಸೆಯನ್ನು ನೀಡಿದ್ದೇವೆ. ಖಾಸಗಿ ಬಸ್ ಮಾಲಕರ ಸಂಘ ಬಹುಕಾಲದ ಕೆಲವು ಬೇಡಿಕೆಗಳನ್ನು ಸರಕಾರದ ಮುಂದಿರಿಸಿದ್ದು, ಅವುಗಳನ್ನು ಪರಿಶೀಲಿಸುವಂತೆ ನಾವು ಸರಕಾರಕ್ಕೆ ಮನವಿ ಮಾಡುತ್ತೇವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿರುವ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.

ಖಾಸಗಿ ಬಸ್ ಮಾಲಕರ ಸಂಘದ ಬೇಡಿಕೆಗಳು: ರಾಜ್ಯದಲ್ಲಿ 17 ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳು ಓಡುತ್ತಿವೆ. ಉಳಿದ 13 ಜಿಲ್ಲೆಗಳಲ್ಲಿ ಕೆಎಸ್ಸಾರ್ಟಿಸಿಯ ಏಕಸ್ವಾಮ್ಯವಿದೆ. ಖಾಸಗಿ ಬಸ್‌ಗಳಿರುವಲ್ಲಿ ಅವರು ಟಿಕೇಟ್ ದರ ಕಡಿಮೆ ಇಟ್ಟು, ಉಳಿದ ಜಿಲ್ಲೆಗಳಲ್ಲಿ ಹೆಚ್ಚಿನ ದರ ವಸೂಲಿ ಮಾಡುತಿದ್ದಾರೆ. ಈ ತಾರತಮ್ಯ ನಿಲ್ಲಬೇಕು. ರಾಜ್ಯಾದ್ಯಂತ ಒಂದೇ ಟಿಕೇಟ್ ದರ ಜಾರಿಗೊಳ್ಳಬೇಕು ಎಂಬುದು ತಮ್ಮ ಬೇಡಿಕೆಯಾಗಿದೆ.
ತಮಿಳುನಾಡಿನಲ್ಲಿ ಸರಕಾರಿ ಹಾಗೂ ಖಾಸಗಿ ಬಸ್‌ಗಳ ಪ್ರಮಾಣ 60:40 ಇದೆ. ಇದರಿಂದ ಅಲ್ಲಿ ಸಾರಿಗೆ ಮುಷ್ಕರ ನಡೆಯುವುದೇ ಇಲ್ಲ. ಅದನ್ನೂ ರಾಜ್ಯದಲ್ಲೂ ಅಳವಡಿಸಬೇಕು. ಇಲ್ಲೂ ರಾಜ್ಯಾದ್ಯಂತ 60:40ರ ಪ್ರಮಾಣದಲ್ಲಿ ಸರಕಾರಿ ಹಾಗೂ ಖಾಸಗಿ ಬಸ್ ಓಡಲು ಪರವಾನಿಗೆ ನೀಡಬೇಕು. ಆಗ ಸಾರಿಗೆ ಮುಷ್ಕರ ನಡೆಯುವ ಸಾಧ್ಯತೆಯೇ ಇರುವುದಿಲ್ಲ ಎಂದರು.

ಅಲ್ಲದೇ ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಕಾನೂನಿನಡಿ ಸರಕಾರಿ ರೂಟ್‌ನಲ್ಲಿ ಖಾಸಗಿಯವರಿಗೆ ಪರವಾನಿಗೆ ನೀಡಲು ಅವಕಾಶವಿದೆ. ಅದರಂತೆ ರಾಜ್ಯದಲ್ಲೂ 60:40ರ ಅನುಪಾತದಲ್ಲಿ ಸರಕಾರಿ ಹಾಗೂ ಖಾಸಗಿ ಬಸ್ ಓಡಿಸಲು ವ್ಯವಸ್ಥೆ ಮಾಡಬೇಕು ಎಂದರು.

ನಾವೀಗ ಮೂರು ತಿಂಗಳ ಪರವಾನಿಗೆ ತೆರಿಗೆಯನ್ನು ಮುಂಚಿತವಾಗಿ ಕಟ್ಟುತಿದ್ದೇವೆ. ಅದನ್ನು ತಿಂಗಳಿಗೆ ಇಳಿಸುವಂತೆ ಕೋರುತ್ತೇವೆ. ಸರಕಾರಿ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ, ನಿತ್ಯ ಪ್ರಯಾಣಿಕರಿಗೆ ಟಿಕೇಟ್ ದರದಲ್ಲಿ ರಿಯಾಯಿತಿ ಇದ್ದು, ಸರಕಾರ ಅದನ್ನು ಭರಿಸುತ್ತದೆ. ಖಾಸಗಿಯವರಿಗೂ ಶೇ.50ರಷ್ಟು ರಿಯಾಯಿತಿಯನ್ನು ಭರಿಸುವಂತಾಗಬೇಕು. ಟೋಲ್‌ನಲ್ಲೂ ಖಾಸಗಿ ಬಸ್‌ಗಳಿಗೆ ರಿಯಾಯಿತಿ ನೀಡುವಂತಾಗಬೇಕು. ಅಲ್ಲದೇ ಈಗ ಇರುವ 50 ವಿನಾಯಿತಿಯನ್ನು ಹೆಚ್ಚಿಸಬೇಕು ಎಂದರು.

ಸರಂಡರ್ ಬಸ್‌ಗಳು ರಸ್ತೆಗೆ: ವಿವಿಧ ಕಾರಣಗಳಿಂದ ಇಲಾಖೆಗೆ ಸರಂಡರ್ ಮಾಡಿರುವ ಸುಮಾರು 1000ದಷ್ಟು ಬಸ್‌ಗಳನ್ನು ನಾಳೆ ಓಡಿಸಲು ಅನುಮತಿ ನೀಡುವುದಾಗಿ ಸರಕಾರ ತಿಳಿಸಿದೆ. ಇವುಗಳಿಗೆ ಪರವಾನಿಗೆಗಾಗಿ ನಾವು ನಾಳೆ ಅರ್ಜಿ ಸಲ್ಲಿಸುತ್ತೇವೆ ಎಂದು ಸುರೇಶ್ ನಾಯಕ್ ತಿಳಿಸಿದರು.

ರಾಜ್ಯದಲ್ಲಿ ಸುಮಾರು 27000ದಷ್ಟು ಕೆಎಸ್ಸಾರ್ಟಿಸಿ ಬಸ್‌ಗಳು ಓಡಾಟ ನಡೆಸುತ್ತಿವೆ. ಇವುಗಳ ಸಂಚಾರ ನಾಳೆಯಿಂದ ನಿಂತರೂ ನಾವು ಅಷ್ಟೇ ಸಂಖ್ಯೆಯ ಬಸ್, ಮ್ಯಾಕ್ಸಿ ಕ್ಯಾಬ್ ಹಾಗೂ ಇತರ ವಾಹನಗಳನ್ನು ಓಡಿಸಲು ಸಾಧ್ಯವಿದೆ. ಖಾಸಗಿ ಬಸ್‌ಗಳು ಓಡಾಡುವ 17 ಜಿಲ್ಲೆಗಳಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಉಳಿದ ಜಿಲ್ಲೆಗಳಲ್ಲಿ ಸರಕಾರ ಕೈಗೊಳ್ಳುವ ಕ್ರಮಕ್ಕೆ ನಮ್ಮ ಸಹಕಾರವಿದೆ ಎಂದರು.

ಕರಾವಳಿಯಲ್ಲಿ ಖಾಸಗಿಯವರ 2500ರಷ್ಟು ಬಸ್‌ಗಳು ಓಡುತಿದ್ದು, ಉಡುಪಿ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ದಕ್ಷಿಣ ಕನ್ನಡ ದಲ್ಲೂ ಪುತ್ತೂರು, ಸುಳ್ಯ ಹಾಗೂ ಧರ್ಮಸ್ಥಳದಂಥ ಕಡೆಗಳಲ್ಲಿ ಸಮಸ್ಯೆಯಾದರೂ ಬದಲಿ ವ್ಯವಸ್ಥೆ ಮಾಡಲು ಅವಕಾಶವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಂದೀಪ್ ಕೆ., ಉಪಾಧ್ಯಕ್ಷ ಸುಧಾಕರ ಕಲ್ಮಾಡಿ, ಖಜಾಂಚಿ ಚಂದನಂ ವಳಕಾಡು, ನಾಗರಾಜ ಶೆಟ್ಟಿಗಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News