ವೈದ್ಯಕೀಯ ಕಾರಣದಿಂದ 24 ವಾರಗಳ ಬಳಿಕ ಗರ್ಭಪಾತಕ್ಕೆ ಮಹಿಳೆಗೆ ಹೈಕೋರ್ಟ್ ಅನುಮತಿ

Update: 2021-04-06 14:39 GMT

ಹೊಸದಿಲ್ಲಿ: ಭ್ರೂಣವು ಗಣನೀಯ ಅಸಹಜತೆಗಳನ್ನು ಹೊಂದಿದೆ ಎಂದು ವೈದ್ಯಕೀಯ ಮಂಡಳಿಯಿಂದ ವರದಿ ಸಲ್ಲಿಕೆಯ ಹಿನ್ನೆಲೆಯಲ್ಲಿ ಈಗಾಗಲೇ 24 ವಾರಗಳಿಗೂ ಹೆಚ್ಚಿನ ಅವಧಿಗೆ ಗರ್ಭವನ್ನು ಹೊತ್ತಿರುವ ಮಹಿಳೆಗೆ ಗರ್ಭಪಾತ ಮಾಡಿಸಿಕೊಳ್ಳಲು ದಿಲ್ಲಿ ಉಚ್ಚ ನ್ಯಾಯಾಲಯವು ಮಂಗಳವಾರ ಅನುಮತಿ ನೀಡಿದೆ.

ನ್ಯಾ.ಪ್ರತಿಭಾ ಎಂ.ಸಿಂಗ್ ಅವರು ಆದೇಶವನ್ನು ಹೊರಡಿಸುವಾಗ,ಮಹಿಳೆಯು ಹೃದ್ರೋಗಿಯಾಗಿರುವುದರಿಂದ ಮತ್ತು ರಕ್ತವನ್ನು ತೆಳುವಾಗಿಸುವ ಔಷಧಿಗಳನ್ನು ಸೇವಿಸುತ್ತಿರುವುದರಿಂದ ಗರ್ಭಪಾತ ಪ್ರಕ್ರಿಯೆ ಸಂದರ್ಭದಲ್ಲಿ ಆಕೆಯ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಎಂದೂ ವೈದ್ಯಕೀಯ ವರದಿಯು ಹೇಳಿರುವುದನ್ನು ಗಮನಕ್ಕೆ ತೆಗೆದುಕೊಂಡರು.

ಅನುಮತಿಯನ್ನು ಮಂಜೂರು ಮಾಡುವ ಮುನ್ನ ನ್ಯಾ.ಸಿಂಗ್ ಅವರು ಮಹಿಳೆಯ ಪತಿಯೊಂದಿಗೆ ಮಾತನಾಡಿ,ಗರ್ಭಪಾತ ಪ್ರಕ್ರಿಯೆಯೊಂದಿಗೆ ಗುರುತಿಸಿಕೊಂಡಿರುವ ಅಪಾಯಗಳ ಬಗ್ಗೆ ಆತನಿಗೆ ತಿಳಿದಿದೆ ಎನ್ನುವುದನ್ನು ಖಚಿತಪಡಿಸಿಕೊಂಡರು.

ವೈದ್ಯಕೀಯ ಪರೀಕ್ಷೆಯ ಸಂದರ್ಭದಲ್ಲಿ ತನ್ನ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಫೇಶಿಯಲ್ ಹೆಮರೇಜ್ ಅಥವಾ ಮುಖ ರಕ್ತಸ್ರಾವ ಮತ್ತು ಜಲಮಸ್ತಿಷ್ಕ ರೋಗಗಳಿಗೆ ಬಳಲುತ್ತಿದೆ ಎನ್ನುವುದು ತಿಳಿದುಬಂದಿದೆ,ಹೀಗಾಗಿ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ ಮಹಿಳೆ ಮಾರ್ಚ್ ಕೊನೆಯ ವಾರದಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು.

ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯವು ಮಹಿಳೆಯ ಪರೀಕ್ಷೆ ನಡೆಸಲು ಮತ್ತು ಗರ್ಭಪಾತಕ್ಕೆ ಅನುಮತಿ ನೀಡಬಹುದೇ ಎಂಬ ಬಗ್ಗೆ ಸಲಹೆ ನೀಡಲು ಏಮ್ಸ್ ವೈದ್ಯರನ್ನೊಳಗೊಂಡ ವೈದ್ಯಕೀಯ ಮಂಡಳಿಯನ್ನು ನೇಮಕಗೊಳಿಸಿತ್ತು.

ಮಹಿಳೆಯು ಹೃದ್ರೋಗಿಯಾಗಿರುವುದರಿಂದ ಗರ್ಭಪಾತ ಪ್ರಕ್ರಿಯೆಯು ಆಕೆಗೆ ಅಪಾಯವನ್ನುಂಟು ಮಾಡಬಹುದು ಎಂದು ವೈದ್ಯಕೀಯ ಮಂಡಳಿಯು ತನ್ನ ವರದಿಯಲ್ಲಿ ಹೇಳಿತ್ತಾದರೂ,ಭ್ರೂಣವು ಗಣನೀಯ ಅಸಹಜತೆಗಳಿಂದ ನರಳುತ್ತಿರುವುದರಿಂದ ಗರ್ಭಪಾತವನ್ನು ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News