ಜೋರ್ಡಾನ್ ರಾಜಕುಮಾರನ ಬಂಡಾಯ ಶಮನ: ಅಣ್ಣ ಹಾಗೂ ದೊರೆ ಅಬ್ದುಲ್ಲಾಗೆ ನಿಷ್ಠೆ

Update: 2021-04-06 16:41 GMT
photo: AFP

ಅಮ್ಮಾನ್ (ಜೋರ್ಡಾನ್), ಎ. 6: ಜೋರ್ಡಾನ್ ದೊರೆ ಅಬ್ದುಲ್ಲಾ ವಿರುದ್ಧ ಬಂಡಾಯ ಎದ್ದಿದ್ದಾರೆ ಎಂಬುದಾಗಿ ಭಾವಿಸಲಾಗಿರುವ ಅವರ ಮಲಸಹೋದರ ರಾಜಕುಮಾರ ಹಂಝಾ ತನ್ನ ಅಣ್ಣನಿಗೆ ನಿಷ್ಠೆ ವ್ಯಕ್ತಪಡಿಸಿದ್ದಾರೆ.

 ದೇಶವನ್ನು ಅಸ್ಥಿರಗೊಳಿಸುತ್ತಿದ್ದಾರೆ ಎಂಬ ಆರೋಪದಲ್ಲಿ ರಾಜಕುಮಾರ ಹಂಝರನ್ನು ಗೃಹಬಂಧನದಲ್ಲಿರಿಸಿದ ಎರಡು ದಿನಗಳ ಬಳಿಕ, ರಾಜ ಕುಟುಂಬದ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆದು ಈ ಬೆಳವಣಿಗೆ ಸಂಭವಿಸಿದೆ.

ದೊರೆಯ ಚಿಕ್ಕಪ್ಪ ರಾಜಕುಮಾರ ಹಸನ್ ಮತ್ತು ಇತರ ರಾಜಕುಮಾರರೊಂದಿಗೆ ಸೋಮವಾರ ಮಾತುಕತೆ ನಡೆಸಿದ ಬಳಿಕ, ರಾಜಕುಮಾರ ಹಂಝ, ದೊರೆಗೆ ಸಂಪೂರ್ಣ ನಿಷ್ಠೆ ವ್ಯಕ್ತಪಡಿಸುವ ಪತ್ರಕ್ಕೆ ಮಂಗಳವಾರ ಮುಂಜಾನೆ ಸಹಿ ಹಾಕಿದರು ಎಂದು ಅರಮನೆ ತಿಳಿಸಿದೆ.

‘‘ದೊರೆಯ ವಶಕ್ಕೆ ನಾನು ನನ್ನನ್ನು ಒಪ್ಪಿಸುತ್ತೇನೆ... ಪ್ರೀತಿಯ ಜೋರ್ಡಾನ್ ರಾಜ್ಯದ ಸಂವಿಧಾನಕ್ಕೆ ನಾನು ಬದ್ಧನಾಗಿ ಉಳಿಯುತ್ತೇನೆ’’ ಎಂಬುದಾಗಿ ಪತ್ರದಲ್ಲಿ ಹಂಝ ಹೇಳಿದ್ದಾರೆ. ಈ ಪತ್ರವನ್ನು ಅರಮನೆಯು ಬಿಡುಗಡೆ ಮಾಡಿದೆ.

ಸಂಧಾನದ ಹೊಣೆಗಾರಿಕೆಯನ್ನು ದೊರೆಯು ಮಾಜಿ ಯುವರಾಜನೂ ಆಗಿರುವ ರಾಜಕುಮಾರ ಹಸನ್‌ಗೆ ವಹಿಸಿದ್ದಾರೆ ಹಾಗೂ ಬಿಕ್ಕಟ್ಟಿಗೆ ಸಂಬಂಧಿಸಿ ಕೌಟುಂಬಿಕ ಮಧ್ಯಸ್ಥಿಕೆಗೆ ರಾಜಕುಮಾರ ಹಂಝ ಒಪ್ಪಿದ್ದಾರೆ ಎಂಬುದಾಗಿ ಇದಕ್ಕೂ ಮೊದಲು ಅರಮನೆಯು ಟ್ವೀಟ್ ಮಾಡಿತ್ತು.

ಜೋರ್ಡಾನ್‌ನ ‘ಭದ್ರತೆ ಮತ್ತು ಸ್ಥಿರತೆಗೆ ಬೆದರಿಕೆಯುಂಟು ಮಾಡುವ’ ಚಟುವಟಿಕೆಗಳಲ್ಲಿ ತೊಡಗದಂತೆ ಶನಿವಾರ ಸೇನೆಯು ರಾಜಕುಮಾರ ಹಂಝಾರಿಗೆ ಎಚ್ಚರಿಕೆ ನೀಡಿತ್ತು. ಬಳಿಕ, ಹೇಳಿಕೆಯೊಂದನ್ನು ನೀಡಿರುವ ರಾಜಕುಮಾರ ಹಂಝ, ನನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಹೇಳಿದ್ದರು.

ಮಾಧ್ಯಮ ವರದಿಗಾರಿಕೆಗೆ ನಿಷೇಧ

ದೊರೆ ಅಬ್ದುಲ್ಲಾರ ಮಲಸಹೋದರ ರಾಜಕುಮಾರ ಹಂಝಾರಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಸುದ್ದಿ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪ್ರಸಾರಿಸುವುದನ್ನು ಜೋರ್ಡಾನ್ ಮಂಗಳವಾರ ನಿಷೇಧಿಸಿದೆ.

‘‘ರಾಜಕುಮಾರ ಹಂಝಾ ಬಿನ್ ಹುಸೈನ್ ಮತ್ತು ಇತರರ ಬಗ್ಗೆ ಭದ್ರತಾ ಸಂಸ್ಥೆಗಳು ನಡೆಸುತ್ತಿರುವ ತನಿಖೆಗಳ ಗೌಪ್ಯತೆಯನ್ನು ಕಾಪಾಡುವುದಕ್ಕಾಗಿ ತನಿಖೆಗಳಿಗೆ ಸಂಬಂಧಿಸಿದ ಏನನ್ನೇ ಆದರೂ ಪ್ರಸಾರಿಸುವುದನ್ನು ನಿಷೇಧಿಸಲು ಅಮ್ಮಾನ್‌ನ ಪಬ್ಲಿಕ್ ಪ್ರಾಸಿಕ್ಯೂಟರ್ ನಿರ್ಧರಿಸಿದ್ದಾರೆ’’ ಎಂದು ಸರಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎಲ್ಲ ಸುದ್ದಿ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ನಿಷೇಧವು ಅನ್ವಯಿಸುತ್ತದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News