ಕೋವಿಡ್-19 ಮಾರ್ಗಸೂಚಿ ಜಾಗೃತಿಗಾಗಿ ಮ.ಪ್ರ.ಮುಖ್ಯಮಂತ್ರಿ 24 ತಾಸುಗಳ ಧರಣಿ

Update: 2021-04-06 17:26 GMT

ಭೋಪಾಲ್,ಎ.6: ಮಧ್ಯಪ್ರದೇಶದಲ್ಲಿ ಕೊರೋನ ಸೋಂಕಿನ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗುತ್ತಿರುವಂತೆಯೇ, ಮಾಸ್ಕ್ ಧರಿಸದೆ ಇರುವುದು ಅಪರಾಧವಾಗಿದ್ದು ಹಾಗೂ ಕೋವಿಡ್-19 ಪ್ರಕರಣಗಳ ಹರಡುವಿಕೆಯನ್ನು ನಿಯಂತ್ರಿಸಲು ಸಮರ್ಪಕವಾದ ‘ಸಾಮಾಜಿಕ ನಡವಳಿಕೆ’ಯನ್ನು ಅನುಸರಿಸುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ಮನವಿ ಮಾಡಿದ್ದಾರೆ.

 ಕೋವಿಡ್-19 ತಡೆ ಮಾರ್ಗಸೂಚಿಗಳನ್ನು ಅನುಸರಿಸುವ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಲು 24 ತಾಸುಗಳ ಧರಣಿಯನ್ನು ಆರಂಭಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಜನತೆ ಮಾಸ್ಕ್ ಧರಿಸದೆ ಇರುವುದು, ದೈಹಿಕ ಅಂತರವನ್ನು ಕಾಯ್ದುಕೊಳ್ಳದಿರುವ  ಕಾರಣದಿಂದಾಗಿ ಕೊರೋನ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದೆಯೆಂದು ಚೌಹಾಣ್ ತಿಳಿಸಿದರು. ಶಿವರಾಜ್ ಸಿಂಗ್ ಅವರು ಭೋಪಾಲ್‌ನ ಮಿಂಟೋ ಹಾಲ್‌ನಲ್ಲಿ ‘ಸ್ವಾಸ್ಥ ಆಗ್ರಹ’ ಧರಣಿಯನ್ನು ಮಧ್ಯಾಹ್ನ 12:30ಕ್ಕೆ ಆರಂಭಿಸಿದರು. ತನ್ನ 24 ತಾಸುಗಳ ಈ ಧರಣಿಯಲ್ಲಿ ಅವರು ಆನ್‌ಲೈನ್‌ನಲ್ಲಿ ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಹಾಗೂ ಧರಣಿ ಸ್ಥಳದಿಂದಲೇ ತನ್ನ ಅಧಿಕೃತ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ.

  ‘ಮಾಸ್ಕ್‌ಗಳನ್ನು ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ನಮ್ಮ ಹವ್ಯಾಸವಲ್ಲ. ಇದರ ಜೊತೆಗೆ ಕೊರೋನ ಸಾಂಕ್ರಾಮಿಕವನ್ನು ನಿಯಂತಿಸಲು ನಾವು ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಎಲ್ಲಾ ಅಂಶಗಳು ಜನತೆಯ ಹವ್ಯಾಸದ ಭಾಗವಾಗುವುದಕ್ಕಾಗಿ ನೈತಿಕ ಮನವಿ ಮಾಡುತ್ತೇನೆ ಎಂದು ಚೌಹಾಣ್ ತಿಳಿಸಿದರು.

  ಒಂದು ವೇಳೆ ಯಾರಾದರೂ ಮಾಸ್ಕ್ ಧರಿಸದೆ ಇದ್ದಲ್ಲಿ ಅದರಿಂದಾಗಿ ಆ ವ್ಯಕ್ತಿಯ ಸುತ್ತಮುತ್ತಲಿರುವ ಇತರರ ಮೇಲೂ ಪರಿಣಾಮ ಬೀರಲಿದೆ ಎಂದವರು ತಿಳಿಸಿದರು.

 ಈ ಸೋಮವಾರದಿಂದ ರಾಜ್ಯಾದ್ಯಂತ ಮಾಸ್ಕ್ ಆಂದೋಲನವನ್ನು ಆರಂಭಿಸಿ ರುವುದಾಗಿ ಅವರು ಹೇಳಿದರು.

ಕೇವಲ ಸರಕಾರದ ಪ್ರಯತ್ನದಿಂದ ಕೊರೋನವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಯಾಕೆಂದರೆ ಕೊರೋನ ಸೋಂಕು ಜನರ ಸಾಮಾಜಿಕ ನಡವಳಿಕೆಯಿಂದಾಗಿ ಹರಡುತ್ತದೆಯೆಂದವರು ಹೇಳಿದರು.

ಕೊರೋನ ಹಾವಳಿ ನಿಯಂತ್ರಿಸಲು ಲಾಕ್‌ಡೌನ್ ಸುಲಭವಾದ ಪರಿಹಾರವೇನೂ ಹೌದು. ಆದರೆ ಅದು ಸರಿಯಲ್ಲವೆಂದು ನಾನು ಭಾವಿಸುತ್ತೇನೆ. ಸೀಮಿತ ಮಟ್ಟದ ಲಾಕ್‌ಡೌನ್ ಪರವಾಗಿಲ್ಲ. ಆದರೆ ಖಾಯಂ ಲಾಕ್‌ಡೌನ್ ಒಂದೇ ಪರಿಹಾರವಲ್ಲ’’ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News