ಉಡುಪಿ ಜಿಲ್ಲಾದ್ಯಂತ ಸಾರಿಗೆ ನೌಕರರ ಮುಷ್ಕರಕ್ಕೆ ಉತ್ತಮ ಸ್ಪಂದನ

Update: 2021-04-07 06:11 GMT

ಉಡುಪಿ, ಎ.7: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ಇಂದಿನಿಂದ ಆರಂಭಿಸಿರುವ ಮುಷ್ಕರ ಉಡುಪಿ ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು, ಯಾವುದೇ ಬಸ್‌ಗಳು ರಸ್ತೆಗೆ ಇಳಿಯದೆ ಉಡುಪಿ ಹಾಗೂ ಕುಂದಾಪುರ ಡಿಪೋದಲ್ಲೇ ಉಳಿದುಕೊಂಡಿವೆ.

ಉಡುಪಿ ಡಿಪ್ಪೊದಲ್ಲಿ ಒಟ್ಟು 108 ಬಸ್‌ಗಳಿದ್ದು, 380 ಸಿಬ್ಬಂದಿಯಿದ್ದಾರೆ. ಇವರೆಲ್ಲ ಕರ್ತವ್ಯ ಹಾಜರಾಗದೆ  ಮುಷ್ಕರಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಉಡುಪಿ ಡಿಪೋಗೆ ಆಗಮಿಸಬೇಕಾದ ಕೆಲವೊಂದು ಬಸ್‌ಗಳು ಮುಷ್ಕರದ ಪರಿಣಾಮ ಮಾರ್ಗ ಮಧ್ಯೆ ಸಿಲುಕಿಕೊಂಡಿವೆ. ಹೀಗೆ 24 ಬಸ್ ಗಳು ಬಾಗಲಕೋಟೆ, ಚಾಮರಾಜನಗರ, ಬೆಂಗಳೂರು, ಮೈಸೂರು, ಬೆಳಗಾವಿ, ಜಮಖಂಡಿ, ಇಂಡ್ಲಿ, ಚಿಕ್ಕಮಗಳೂರಿನಲ್ಲೇ ಉಳಿದುಕೊಂಡಿವೆ.

ಉಡುಪಿ ಡಿಪೋದಿಂದ ಪ್ರತಿದಿನ 55 ಮಾರ್ಗಗಳಲ್ಲಿ 55 ಬಸ್‌ಗಳು ಸಂಚರಿಸುತ್ತವೆ. ಆದರೆ ಮುಷ್ಕರದ ಹಿನ್ನೆಲೆಯಲ್ಲಿ ಇವು ಯಾವುದು ಕೂಡ ಓಡಾಟ ನಡೆಸಿಲ್ಲ. ದೂರದ ಊರಿಗೆ ಹೋಗಲು ಆನ್‌ಲೈನ್ ಮೂಲಕ ಬುಕ್ ಮಾಡಿರುವ ಟಿಕೆಟ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಉಡುಪಿ ಡಿಪ್ಪೋ ವ್ಯವಸ್ಥಾಪಕ ಉದಯ ಕುಮಾರ್ ತಿಳಿಸಿದ್ದಾರೆ.

ಮಾಹಿತಿ ಇಲ್ಲದೆ ಬೆಂಗಳೂರು, ಹುಬ್ಬಳ್ಳಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಹೊರಡಲು ಉಡುಪಿ ಕೆಎಸ್ಸಾರ್ಟಿಸಿ ಹಾಗೂ ಕುಂದಾಪುರ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಿಗೆ ಬಂದಿದ್ದ ಕೆಲವು ಪ್ರಯಾಣಿಕರು ಬಸ್ ಇಲ್ಲದೆ ವಾಪಸ್ ಹೋಗುತ್ತಿರುವುದು ಕಂಡುಬಂತು. ಉಡುಪಿ ಜಿಲ್ಲೆಯಿಂದ ಉತ್ತರ ಕನ್ನಡ, ಹುಬ್ಬಳ್ಳಿಗೆ ಹೆಚ್ಚಿನ ಪ್ರಯಾಣಿಕರು ಪ್ರತಿದಿನ ಪ್ರಯಾಣ ಬೆಳೆಸುತ್ತಾರೆ. ಅವರೆಲ್ಲ ಈ ಬಂದ್‌ನಿಂದ ತೊಂದರೆ ಅನುಭವಿಸುವಂತಾಯಿತು.

ಕುಂದಾಪುರ ಡಿಪೋದಲ್ಲಿ ಒಟ್ಟು 104 ಬಸ್‌ಗಳು ಇವೆ. ಪ್ರತಿದಿನ 50 ಬಸ್‌ಗಳು ಇಲ್ಲಿಂದ ಸಂಚರಿಸುತ್ತವೆ. ಬೆಂಗಳೂರು ಸೇರಿದಂತೆ ಹೊರಗಿನಿಂದ ಬಸ್‌ಗಳು ಸೇರಿದಂತೆ ಒಟ್ಟು ಕುಂದಾಪುರ ಡಿಪೋದಿಂದ ಪ್ರತಿದಿನ 90 ಬಸ್ ಗಳು ಓಡಾಡುತ್ತವೆ. ಅವು ಯಾವುದು ಕೂಡ ಇಂದು ಓಡಾಟ ನಡೆಸಿಲ್ಲ. ಹೊರ ಜಿಲ್ಲೆಯಿಂದ ಬರಬೇಕಾದ 13 ಬಸ್‌ಗಳು ಇನ್ನು ಕೂಡ ಬಂದಿಲ್ಲ ಎಂದು ಕುಂದಾಪುರ ಡಿಪೋ ಅಧಿಕಾರಿಗಳು ಮಾಹಿತಿ ನೀಡಿದರು.

ಮುಷ್ಕರದ ಹಿನ್ನೆಲೆಯಲ್ಲಿ ಕುಂದಾಪುರ ಹಾಗೂ ಉಡುಪಿ ಕೆಎಸ್ಸಾರ್ಟಿಸಿ ಬಸ್ ಡಿಪೋಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್!

ಕೆಎಸ್ಸಾರ್ಟಿಸಿ ಬಸ್ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್ಸಿನವರು ಉಡುಪಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಕರನ್ನು ಕರೆಯುತ್ತಿರುವ ದೃಶ್ಯ ಕಂಡುಬಂದಿವೆ. ಭಟ್ಕಳ, ಕಾರ್ಕಳ, ಹೆಬ್ರಿ, ಶಿವಮೊಗ್ಗ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳು ಕೆಎಸ್ಸಾರ್ಟಿಸಿ ನಿಲ್ದಾಣಕ್ಕೂ ಬರುತ್ತಿವೆ. ಆದರೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೇ ಇಲ್ಲದ ಕಾರಣ ಬಸ್‌ಗಳು ಅಲ್ಲಿಂದ ಬರಿಗೈಯಲ್ಲಿ ಹೋಗುತ್ತಿರುವುದು ಕಂಡುಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News