ಕರ್ತವ್ಯದಲ್ಲಿ ಶ್ರೇಷ್ಠತೆಯನ್ನು ಕಂಡುಕೊಳ್ಳಿ: ಡಿಸಿ ಜಿ.ಜಗದೀಶ್

Update: 2021-04-07 08:08 GMT

ಉಡುಪಿ, ಎ.7: ಸಂವಿಧಾನದ ಮೂಲಭೂತ ಕರ್ತವ್ಯದಲ್ಲಿ ಹೇಳಿರುವಂತೆ ಸರಕಾರಿ ಸೇವೆಗೆ ಸೇರುವವರು ತಮ್ಮ ಕರ್ತವ್ಯದಲ್ಲಿ ಶ್ರೇಷ್ಠತೆಯನ್ನು ಕಂಡುಕೊಳ್ಳಬೇಕು. ಆ ಮೂಲಕ ಅತ್ಯುತ್ತಮ ಸಿಬ್ಬಂದಿಯಾಗಿ ಮೂಡಿಬರಬೇಕು. ಆದುದರಿಂದ ಆ ವಾಕ್ಯವನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಉಡುಪಿ ಪೊಲೀಸ್ ತರಬೇತಿ ಶಾಲೆಯ ವತಿಯಿಂದ ಉಡುಪಿ ಚಂದು ಮೈದಾನದಲ್ಲಿ ಬುಧವಾರ ನಡೆದ 12ನೆ ತಂಡದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಕೆಎಸ್‌ಐಎಸ್‌ಎಫ್)ಯ 95 ಮಂದಿ ಪೊಲೀಸ್ ಕಾನ್‌ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಾಲ್ಕು ತುಕಡಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಹೆಚ್ಚಿನವರಲ್ಲಿ ಸೇವೆಗೆ ಸೇರುವ ಮೊದಲು ಇದ್ದ ಮನೋಭಾವ ಸೇವೆಗೆ ಸೇರಿದ ನಂತರ ಬದಲಾಗುತ್ತದೆ. ಆ ರೀತಿ ಮಾಡದೆ ಮೊದಲು ಇದ್ದ ಉತ್ತಮ ಸೇವೆ ನೀಡುವ ಮನೋಭಾವವನ್ನು ಸೇವೆಗೆ ಸೇರಿದ ನಂತರವೂ ಮುಂದುವರಿಸ ಬೇಕು. ಆ ಮೂಲಕ ಉತ್ತಮ ಸಿಬ್ಬಂದಿಯಾಗಿ ಸಂತೃಪ್ತಿಯಿಂದ ನಿವೃತ್ತಿಯಾಗಬೇಕು ಎಂದು ಅವರು ತಿಳಿಸಿದರು.

ರಾಷ್ಟ್ರ ಕಟ್ಟುವ ಹಾಗೂ ಕೈಗಾರಿಕೆಗಳಿಗೆ ರಕ್ಷಣೆ ಒದಗಿಸುವ ದೊಡ್ಡ ಜವಾಬ್ದಾರಿಯನ್ನು ಈ ಹೊಸ ತಂಡಕ್ಕೆ ನೀಡಲಾಗಿದೆ. ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಒಟ್ಟಿಗೆ ಸೇರಿ ಕೆಲಸ ಮಾಡಿದರೆ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರು ತುಂಬಾ ಸಹಕಾರ ನೀಡುತ್ತಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ ಎಂದರು.

ವಿವಿಧ ಸ್ಪರ್ಧೆಗಳಾದ ಹೊರಾಂಗಣ ಪ್ರ- ವಿಶಾಲ ಬೆನಚನಮರಡಿ, ದ್ವಿ- ಸಂತೋಷ ಕಪ್ಪಲಗುದ್ದಿ, ತೃ- ಸೈದುಸಾಬ್ ರಾಮದುರ್ಗ, ಗುರಿ ಅಭ್ಯಾಸ ಪ್ರ- ಅರವಿಂದ, ದ್ವಿ- ಅಶೋಕ ಹಳಬರ, ತೃ-ಮಾರುತಿ ಧೂಳನ್ನವರ್, ಒಳಾಂಗಣ ಪ್ರ- ಮಹೇಶ್ ಎಂ.ಎಂ., ದ್ವಿ- ಮಂಜಿನಾಥ ಶಿಂಗಣ್ಣವರ್, ತೃ-ಶ್ರೀಕಾಂತ್ ಮಂಜಪ್ಪ, ಆಲ್‌ರೌಂಡರ್- ವಿಶಾಲ ಬೆನಚನಮರಡಿ ಅವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ವರದಿ ವಾಚಿಸಿದರು. ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ರಾಘವೇಂದ್ರ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿ ವಂದಿಸಿದರು. ಕೆ.ಸಿ.ರಾಜೇಶ್ ಹಾಗೂ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


12ನೆ ತಂಡದಲ್ಲಿ ಕೆಎಸ್‌ಐಎಸ್‌ಎಫ್ ಒಂದನೆ ಪಡೆಯಿಂದ 21, ಎರಡನೇ ಪಡೆಯಿಂದ 66 ಹಾಗೂ 8 ಮಂದಿ ನಾಗರಿಕ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಒಟ್ಟು 95 ಮಂದಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News