ಕಂಕನಾಡಿಬಳಿ ಪೈಪ್‌ಲೈನ್ ನಲ್ಲಿ ನೀರು ಸೋರಿಕೆ: ಪೋರ್ಟ್, ಕಂಟೋನ್ಮೆಂಟ್ ವಾರ್ಡ್‌ನಲ್ಲಿ ನೀರು ಪೂರೈಕೆ ವ್ಯತ್ಯಯ

Update: 2021-04-07 11:23 GMT

ಮಂಗಳೂರು, ಎ.7: ಮಹಾನಗರ ಪಾಲಿಕೆ ವ್ಯಾಪ್ತಿಯ ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಎದುರಿನ ರಸ್ತೆ ಬಳಿ ನೀರು ಸರಬರಾಜಿನ ಪೈಪ್‌ನಲ್ಲಿ ಸೋರಿಕೆ ಕಂಡ ಹಿನ್ನೆಲೆಯಲ್ಲಿ ಕಾಂಕ್ರಿಟ್ ರಸ್ತೆಯಲ್ಲಿ ಅಲ್ಲಲ್ಲಿ ಅಗೆದು ಹಾಕಿ ಕಳೆದ ಸುಮಾರು ಒಂದು ವಾರದಿಂದೀಚೆಗೆ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ನಡುವೆ ಈ ಕಾಮಗಾರಿಯಿಂದಾಗಿ ಕಳೆದ ಹಲವು ದಿನಗಳಿಂದ ಪಾಲಿಕೆ ವ್ಯಾಪ್ತಿಯ ಪೋರ್ಟ್ ವಾರ್ಡ್, ಕಂಟೋನ್ಮೆಂಟ್ ವಾಡ್‌ಗಳ ಸುತ್ತಲಿನ ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಒಂದೆಡೆ ನೀರಿಗಾಗಿ ಜನರು ಸಮಸ್ಯೆ ಎದುರಿಸುತ್ತಿರುವಂತೆಯೇ ಕಳೆದೊಂದು ವಾರದಿಂದ ಕಾಂಕ್ರಿಟ್ ರಸ್ತೆಯನ್ನು ಅಗೆದು ಹಾಕಿರುವುದರಿಂದ ವಾಹನ ದಟ್ಟನೆಯ ಪ್ರದೇಶವಾದ ಈ ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಅಗೆದಿರುವ ರಸ್ತೆಯನ್ನು ಮುಚ್ಚಿ ಕಾಂಕ್ರಿಟ್ ಹಾಕಿ ಸರಿಪಡಿಸಿದ ಬಳಿಕ ಈ ರಸ್ತೆ ವಾಹನ ಸಂಚಾರಕ್ಕೆ ಮುಕ್ತಗೊಳ್ಳಲು ಸುಮಾರು 20 ದಿನಳಗಳಾದರೂ ಬೇಕು. ಅಲ್ಲಿಯವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರರು ಪರದಾಡುವುದನ್ನು ಮುಂದುವರಿಸಬೇಕಾದ ಪರಿಸ್ಥಿತಿ ಇದೆ.

ಪಡೀಲ್ ಪಂಪ್‌ಹೌಸ್‌ನಿಂದ ಪೂರೈಕೆಯಾಗುವ ನೀರಿನ ಪೈಪ್‌ಲೈನ್‌ನಲ್ಲಿ ಕಂಕನಾಡಿ ಫಾದರ್ ಮುಲ್ಲರ್ ಎದುರು ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸೋರಿಕೆ ಎಲ್ಲೆಂದು ಸಮರ್ಪಕವಾಗಿ ಅರಿಯಲು ಸಾಧ್ಯವಾಗದೆ ನಾಲ್ಕು ಕಡೆಗಳಲ್ಲಿ ಕಾಂಕ್ರಿಟ್ ರಸ್ತೆಯನ್ನು ಬೃಹತ್ ಗಾತ್ರಗಳಲ್ಲಿ ಅಗೆಯಲಾಗಿದೆ. ಸದ್ಯ ಸೋರಿಕೆ ಪತ್ತೆಯಾಗಿದ್ದು, ದುರಸ್ತಿ ಕಾರ್ಯ ನಡೆದಿದೆ ಎಂದು ಪಾಲಿಕೆ ನೀರು ಸರಬರಾಜು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಎದುರಿನ ನೀರಿನ ಪೈಪ್‌ಲೈನ್ ಸೋರಿಕೆಯ ದುರಸ್ತಿ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ನಮ್ಮ ವಾರ್ಡ್ ಆದ ಪಾಂಡೇಶ್ವರ, ಟೆಲಿಕಾಂ ರಸ್ತೆ, ರೊಸಾರಿಯೊ ಚರ್ಚ್ ಕಂಪೌಂಡ್ ರಸ್ತೆ, ಬದ್ರಿಯಾ ಕಾಲೇಜು, ಕಂದುಕ, ಹೊಯ್ಗೆಬಜಾರ್, ಗೂಡ್‌ಶೆಡ್‌ಗಳಲ್ಲಿ ಕಳೆದ 11 ದಿನಗಳಿಂದ ನೀರಿನ ಸಮಸ್ಯೆ ಎದುರಾಗಿದೆ. ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದರೆ ಸಮರ್ಪಕ ಉತ್ತರ ದೊರಕಿಲ್ಲ. ನೀರಿನ ಸಮಸ್ಯೆಯಿಂದಾಗಿ ಇದೀಗ ಜನರು ಪ್ರತಿಭಟನೆಗೆ ಮುಂದಾಗುವ ಪರಿಸ್ಥಿತಿ ಎದುರಾಗಿದೆ. ಸ್ಥಳೀಯಾಡಳಿತ ಹಾಗೂ ಮೇಯರ್ ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಎಂದು ಪೋರ್ಟ್ ವಾರ್ಡ್‌ನ ಪಾಲಿಕೆ ಸದಸ್ಯರಾದ ಲತೀಫ್ ಕಂದುಕ ಆಗ್ರಹಿಸಿದ್ದಾರೆ.

ನೀರು ಸೋರಿಕೆ ಪತ್ತೆಯಾಗಿ ದುರಸ್ತಿ ಪೂರ್ಣ
ಕಂಕನಾಡಿ- ವೆಲೆನ್ಸಿಯಾ ರಸ್ತೆ ನಡುವೆ ನೀರಿನ ಪೈಪ್‌ಲೈನ್ ಸೋರಿಕೆ ಪತ್ತೆಯಾಗಿದ್ದು, ದುರಸ್ತಿ ಕಾಮಗಾರಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇಂದಿನಿಂದ ನೀರು ಪೂರೈಕೆ ಅಬಾಧಿತವಾಗಿ ಮುಂದುವರಿಯಲಿದೆ. ಹಳೆ ಪೈಪ್‌ಲೈನ್ ಆದ ಕಾರಣ ಸೋರಿಕೆ ಕಂಡುಹಿಡಿಯುವುದು ಸ್ವಲ್ಪ ಕಷ್ಟವಾಯಿತು. ದುರಸ್ತಿ ಕಾಮಗಾರಿಯ ಹಿನ್ನೆಲೆಯಲ್ಲಿ ಉಳಿದ ವಾರ್ಡ್‌ಗಳಿಗೆ ಲೋ ಪ್ರೆಶರ್‌ನಲ್ಲಿ ನೀರು ಪೂರೈಕೆ ಮಾಡಬೇಕಾಯಿತು. ಹಾಗಾಗಿ ಕೆಲವು ದಿನಗಳಿಂದ ಕೆಲವು ವಾರ್ಡ್‌ಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಅದೀಗ ಸಮಸ್ಯೆ ಬಗೆಹರಿದಿದೆ. ಇನ್ನು ಅಗೆದಲ್ಲಿ ಮುಚ್ಚಿ ಕಾಂಕ್ರಿಟ್ ಹಾಕುವ ಕಾಮಗಾರಿ ನಡೆಯಲಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿ ಯಶವಂತ ಪ್ರಭು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News