ದುಬೈಯಲ್ಲಿ ವಿಶ್ವ ಬ್ಯಾರಿ ಸಮ್ಮೇಳನಕ್ಕೆ ಸಿದ್ಧತೆ: ರಹೀಂ ಉಚ್ಚಿಲ್

Update: 2021-04-07 11:42 GMT

ಮಂಗಳೂರು, ಎ.7: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ವಿಶ್ವದಾದ್ಯಂತ ನೆಲೆಸಿರುವ ಬ್ಯಾರಿ ಭಾಷಿ ಸಂಘಟನೆಯ ಪ್ರಮುಖರನ್ನು ಒಳ ಗೊಂಡ ಸ್ವಾಗತ ಸಮಿತಿಯನ್ನು ರಚಿಸಿ ಬ್ಯಾರಿ ಸಂಘಟನೆಗಳ ಸಹಯೋಗದೊಂದಿಗೆ ಕೊರೋನ ಪರಿಸ್ಥಿತಿಯನ್ನು ಅವಲೋಕಿಸಿ ಸರಕಾರದ ನಿಯಮಾವಳಿಗೆ ಬದ್ಧವಾಗಿ ಸರಕಾರದ ಅನುಮತಿ ಪಡೆದು ನವೆಂಬರ್‌ನಲ್ಲಿ ‘ವಿಶ್ವ ಬ್ಯಾರಿ ಸಮ್ಮೇಳನ 2021’ನ್ನು ದುಬೈ (ಯುಎಇ)ಯಲ್ಲಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅಕಾಡಮಿಯ ಸರ್ವ ಸದಸ್ಯರ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ವಿಶ್ವದಲ್ಲಿರುವ ನಾನಾ ದೇಶದ ಬ್ಯಾರಿ ಸಂಘಟನೆಗಳ ಪ್ರಮುಖರು, ಪ್ರತಿನಿಧಿಗಳು, ಬ್ಯಾರಿ ಆಂದೋಲನದ ರೂವಾರಿಗಳನ್ನು ಒಳಗೊಂಡ ಸ್ವಾಗತ ಸಮಿತಿ ರಚನೆಯಾಗಲಿದೆ. ಇದರಲ್ಲಿ ದೇಶದ ಬೇರೆ ಬೇರೆ ರಾಜ್ಯಗಳ ಮತ್ತು ಕರ್ನಾಟಕ ರಾಜ್ಯದ ಬ್ಯಾರಿ ಭಾಷಿಕರ ಬಾಹುಳ್ಯವಿರುವ ಜಿಲ್ಲೆಗಳ ಪ್ರಮುಖರರನ್ನು ಸೇರಿಸಿಕೊಳ್ಳಲಾಗುವುದು.

ಸರಕಾರಕ್ಕೆ ಆರ್ಥಿಕ ಹೊರೆ ನೀಡದೆ ಖಾಸಗಿ ಸಂಘಟನೆಗಳ ಸಹಯೋಗದಲ್ಲಿ ಈ ಸಮ್ಮೇಳನ ಜರುಗಲಿದೆ. ಸಮ್ಮೇಳನದಲ್ಲಿ ಅಕಾಡಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ, ಪುರಸ್ಕಾರ ಪ್ರದಾನ, ಸಾಧಕರಿಗೆ ಸನ್ಮಾನ, ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳ ಸಹಿತ ವಿಶ್ವದಾದ್ಯಂತವಿರುವ ಬ್ಯಾರಿ ಬಾಷಿಕರ ಸಾಮಾಜಿಕ, ಶೈಕ್ಷಣಿಕ, ನಿರುದ್ಯೋಗ, ಆರೋಗ್ಯ ಮುಂತಾದ ಸಮಸ್ಯೆಗಳಿಗೆ ಒಂದೆಡೆ ಸೇರಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಈಗಾಗಲೇ ತುಳು, ಕೊಂಕಣಿ ಸೇರಿದಂತೆ ಹಲವಾರು ಭಾಷಿಕರು ವಿಶ್ವಮಟ್ಟದ ಸಮ್ಮೇಳನವನ್ನು ನಡೆಸಿ ಯಶಸ್ವಿಯಾಗಿದ್ದು, ಅದರಂತೆ ನಡೆಯಲಿರುವ ಈ ಸಮ್ಮೇಳನದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಸಚಿವರುಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ದರ್ಶಿಗಳು, ನಿರ್ದೇಶಕರು, ಬ್ಯಾರಿ ಬಾಷಿಕರು ಹೆಚ್ಚಾಗಿರುವ ಜಿಲ್ಲೆಗಳ ಸಂಸದರು, ಶಾಸಕರು, ದೇಶ ವಿದೇಶಗಳಿಂದ ಆಗಮಿಸಲಿರುವ ಸಂಪನ್ಮೂಲ ವ್ಯಕ್ತಿಗಳು, ಕವಿ, ಸಾಹಿತಿ, ಸಾಂಸ್ಕೃತಿಕ ಲೋಕದ ದಿಗ್ಗಜರ ಸಹಿತ ಹಲವು ಣ್ಯರು ಇದರಲ್ಲಿ ಭಾಗವಹಿಸಲಿದ್ದಾರೆ.

ಕೊರೋನ ಹಿನ್ನೆಲೆಯಲ್ಲಿ ಜೂಮ್ ಆ್ಯಪ್ ಮೂಲಕ ಸ್ವಾಗತ ಸಮಿತಿಯ ಸಭೆ ನಡೆಯಲಿದೆ. ಸಹಜ ಸ್ಥಿತಿಗೆ ಬಂದ ಬಳಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಿದ್ಧತೆ ನಡೆಸಲಾಗವುದು ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News