ಕೊಡಿಯಲ್‌ ಬೈಲ್;‌ ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 24x7 ರೇಡಿಯೋಲಜಿ ಸೇವೆ: ಡಾ.ಮುಹಮ್ಮ ದ್ ತಾಹಿರ್

Update: 2021-04-07 12:09 GMT

ಮಂಗಳೂರು, ಎ.7: ನಗರದ ಕೊಡಿಯಲ್‌ಬೈಲ್‌ನ ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆ ನಿರಂತರ (24x7) ರೇಡಿಯೋಲಜಿ ಸೇವೆಗಳನ್ನು ನುರಿತ ವೈದ್ಯರ ಉಪಸ್ಥಿತಿಯೊಂದಿಗೆ ನೀಡಲು ಸಜ್ಜಾಗಿದೆ. ಮೂತ್ರ ಪಿಂಡದ ಕಲ್ಲು ನಿವಾರಿಸುವ ಅತ್ಯಾಧುನಿಕ ಉಪಕರಣ ಲಿಥೋಟ್ರಿಪ್ಟರ್  ಹೊಸ ಸೇರ್ಪಡೆಯಾಗಿದೆ ಎಂದು ಕೊಡಿಯಾಲ್ ಬೈಲ್ ಯೆನೆಪೊಯ ಆಸ್ಪತ್ರೆಯ ವ್ಯವಸ್ಥಾಪಕ  ನಿರ್ದೇಶಕ ಡಾ.ಮುಹಮ್ಮ ದ್ ತಾಹಿರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಸೇವೆಯೊಂದಿಗೆ ಹಗಲು ಅಥವಾ ರಾತ್ರಿಯ ಯಾವುದೇ ಸಮಯದಲ್ಲಿ ಆಸ್ಪತ್ರೆಗೆ ಬರುವಂತಹ ರೋಗಿಗಳು ರೋಗ ನಿರ್ಣಯವನ್ನು (diagnosis) ಪಡೆಯಬಹುದು. ಆಸ್ಪತ್ರೆಯು ತನ್ನ ರೇಡಿಯೋಲೊಜಿ ವಿಭಾಗಕ್ಕೆ ಹೊಸ ತಂತ್ರಜ್ಞಾನವನ್ನು ತರುವ ಮೂಲಕ ನವೀಕೃತಗೊಂಡ ಉಪಕರಣಗಳನ್ನು ಅಳವಡಿಸಿದೆ  ಹಾಗೂ ಹಿರಿಯ ರೇಡಿಯೋಲೊಜಿ ತಜ್ಞರಾದ ಡಾ. ದೇವದಾಸ್ ಆಚಾರ್ಯ, ಡಾ.ರವಿಚಂದ್ರ ಜಿ. ಮತ್ತು ಡಾ. ವಿನಾಯಕ ಯು.ಎಸ್ ಅವರ ನೇತೃತ್ವದ ತಂಡ ಆಸ್ಪತ್ರೆಯ ತಂಡದೊಂದಿಗೆ ಕೈಜೋಡಿಸಿದೆ. 2021ರ ಏಪ್ರಿಲ್ 7ರ ವಿಶ್ವ ಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಹೊಸ ಸೌಲಭ್ಯವನ್ನು ಪ್ರಾರಂಭಿಸಲು ನಿರ್ಧರಿಸಿರುವುದಾಗಿ  ಡಾ.ಮುಹಮ್ಮದ್ ತಾಹಿರ್ ತಿಳಿಸಿದ್ದಾರೆ.

ಸೂಕ್ತ ಚಿಕಿತ್ಸಾ ವಿಧಾನವನ್ನು ನಿರ್ಣಯಿಸಲು ಸರಿಯಾದ ರೋಗ ನಿರ್ಣಯವು ಅವಶ್ಯಕವಾಗಿದೆ. ವೈದ್ಯಕೀಯ ತುರ್ತು ಸ್ಥಿತಿಗಳು ಯಾವುದೇ ಸಮಯದಲ್ಲಿ ಉದ್ಭವಿಸಬಹುದು ಮತ್ತು ಚಿಕಿತ್ಸೆಯು ವಿಳಂಬವಿಲ್ಲದೆ ಪ್ರಾರಂಭವಾಗಬೇಕು. ವೈದ್ಯರ ಲಭ್ಯತೆಯೊಂದಿಗೆ ದೊರಕಲಿರುವ (ಹಗಲು-ರಾತ್ರಿ )ನಿರಂತರ ರೇಡಿಯೋಲಜಿ ಸೇವೆಯು ನಗರದ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಿದೆ. ಮಂಗಳೂರಿನ ಹೃದಯಭಾಗದಲ್ಲಿ ನೆಲೆಗೊಂಡಿರುವ ಈ ಹೊಸ ಸೌಲಭ್ಯವು ರೋಗಿಗಳ ತುರ್ತು ಆರೈಕೆಗಾಗಿ, ಜೀವ ರಕ್ಷಣೆಯ ದೃಷ್ಟಿಯಿಂದ ದೊಡ್ಡ ವರದಾನವಾಗಲಿದೆ. ಇದು ಜೀವ ಉಳಿಸಬಲ್ಲ ಸೇವೆಯಾಗಿದೆ. ಯೆನೆಪೊಯ ಆಸ್ಪತ್ರೆ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿರುವ ಅತ್ಯುತ್ತಮ ರೇಡಿಯೋಲೊಜಿ ಮೂಲ ಸೌಕರ್ಯ ವನ್ನು ನೀಡುತ್ತಿದೆ ಎಂದು ಯುರೋಲಜಿ ವಿಭಾಗದ ವೈದ್ಯರಾದ ಡಾ.ಅಶೋಕ್ ಪಂಡಿತ್  ತಿಳಿಸಿದ್ದಾರೆ.

ಹೊಸ ರೇಡಿಯೋಲಜಿ ಸಲಕರಣೆಗಳು

 ಕ್ಯಾನನ್ ಆಕ್ವಿಲಿಯನ್ ಸ್ಟಾರ್ಟ್ ಸಿಟಿ ಸಿಸ್ಟಮ್, ಕಾರ್ಡಿಯಾಕ್  ಸ್ಕ್ಯಾನ್ ಹೊರತುಪಡಿಸಿ ಎಲ್ಲಾ ರೀತಿಯ ಸ್ಕ್ಯಾನ್/ ಇಂಟರ್ವೆನ್ಷಯನಲ್ ರೇಡಿಯೋಲೊಜಿ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಫಿಲಿಪ್ಸ್ ಇಂಜೀನಿಯಾ 1.5 ಟಿ ಎಂಆರ್‌ಐ ಸಿಸ್ಟಮ್ - ಆಡಿಯೋ ಮತ್ತು ವಿಡಿಯೋ ಸೌಲಭ್ಯಗಳೊಂದಿಗೆ ನಿರ್ಮಿಸಲಾದ ಈ ಉಪಕರಣ ಮಾರುಕಟ್ಟೆಯಲ್ಲಿ ಲಭ್ಯವಾಗುವ ಅತ್ಯಧಿಕ ಬೋರ್ ಹೊಂದಿದೆ.

ಸ್ಯಾಮ್ಸಂಗ್ ಎಚ್ ಎಸ್ 70ಎ ಅಲ್ಟ್ರಾ ಸೌಂಡ್ ಸಿಸ್ಟಮ್  4ಡಿ ಸ್ಕ್ಯಾನ್ ನೊಂದಿಗೆ ಪಿತ್ತಜನಕಾಂಗದ ಕಾಯಿಲೆ ಮತ್ತು ಭ್ರೂಣದ ಚಿತ್ರಣವನ್ನು ಪತ್ತೆಹಚ್ಚಲು ಫೈಬ್ರೊಸ್ಕ್ಯಾನ್ ಸೌಲಭ್ಯ ಹೊಂದಿದೆ. ಡಿಜಿಕ್ಸ್ ಎಕೋ ಡಿಜಿಟಲ್ ಎಕ್ಸರೆ ಸಿಸ್ಟಮ್ - ವ್ಯಾಪಕ ಶ್ರೇಣಿ ಹೊಂದಿರುವ ಆತ್ಯಾಧುನಿಕ ಡಿಜಿಟಲ್ ಎಕ್ಸರೆ ಉಪಕರಣವಾಗಿದೆ.

ಮೆಟಲ್‌ ಟ್ರೋನಿಕಾ ಫ್ಲಾಟ್ ಎಸ್ ಇ ಮ್ಯಾಮೋಗ್ರಾಫರ್  ಸ್ತನ ಗ್ರಂಥಿಗಳ ಸ್ಪಷ್ಟ ಚಿತ್ರಗಳನ್ನು ತೆಗೆಯಬಲ್ಲ ಹೆಚ್ಚು ಪರಿಣಾಮ ಕಾರಿ ಉಪಕರಣ ವಾಗಿದೆ. ಆಸ್ಪತ್ರೆಯ ರೇಡಿಯೋಲಜಿ ವಿಭಾಗವು ಸಾಕಷ್ಟು ತಾಂತ್ರಿಕ ಮತ್ತು ಶುಶ್ರೂಷಾ ಸಿಬ್ಬಂದಿ, ನಿರಂತರ ವಿದ್ಯುತ್ ಸರಬರಾಜು ಮತ್ತು ಇತರ ಬ್ಯಾಕ್ ಆ್ಯಪ್ ಗಳೊಂದಿಗೆ ಸುಸಜ್ಜಿತವಾಗಿದೆ. ಇದರ ಜೊತೆಗೆ ಆಸ್ಪತ್ರೆಯು ತನ್ನ ಯುರೊಲಜಿ ಸೇವೆಗಳಿಗೆ ಡಾರ್ನಿಯರ್ ಕಾಂಪ್ಯಾಕ್ಟ್  ಡೆಲ್ಟಾ ಲಿಥೋ ಟ್ರಿಪ್ಟರ್ ಅನ್ನು ಸೇರಿಸುತ್ತಿದೆ. ರೋಗಿಗಳಲ್ಲಿ ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸುವಲ್ಲಿ ಮತ್ತು ಚೇತರಿಕೆಯ ಸಮಯವನ್ನು ಸುಧಾರಿಸುವಲ್ಲಿ ಈ ಉಪಕರಣವು ಪರಿಣಾಮಕಾರಿ ಚಿತ್ರಣವನ್ನು ನೀಡುತ್ತದೆ. ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯ ಮೇಲಾಗುವ ರೆಡಿಯೇಶನ್ ಪರಿಣಾಮವನ್ನು ಶೇ 75ರಷ್ಟು ಕಡಿತಗೊಳಿಸಲಿದೆ ಎಂದು ಡಾ.ದೇವದಾಸ್ ಆಚಾರ್ಯ ತಿಳಿಸಿದ್ದಾರೆ.

1995ರಲ್ಲಿ ಸ್ಥಾಪನೆಯಾದ ಯೆನೆಪೊಯ ಆಸ್ಪತ್ರೆ 234 ಹಾಸಿಗೆಗಳ ಉನ್ನತ ಮಟ್ಟದ ಚಿಕಿತ್ಸಾ ಕೇಂದ್ರವಾಗಿದ್ದು, ಹೃದ್ರೋಗ ಮತ್ತು ಹೃದಯ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ಮೂತ್ರಶಾಸ್ತ್ರ ಮತ್ತು ನೆಫ್ರಾಲಜಿ, ನರವಿಜ್ಞಾನ ಮತ್ತು ನರ ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ವೈದ್ಯಕೀಯ ಮತ್ತು ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ, ಮೂಳೆ ಚಿಕಿತ್ಸೆ, ನವಜಾತ ಶಿಶು ಚಿಕಿತ್ಸೆ, ಮಕ್ಕಳ ಚಿಕಿತ್ಸೆ ವಿಭಾಗ, ಪ್ಲಾಸ್ಟಿಕ್ಆಸ್ಪತ್ರೆ ಬೆನ್ನು ಮೂಳೆಯ ಕ್ಲಿನಿಕ್ ಮತ್ತು ಡಯಾಲಿಸಿಸ್ ಘಟಕ ಇತ್ಯಾದಿಗಳನ್ನು ಹೊಂದಿದೆ.

ರೋಗಿಗಳ ಅನುಕೂಲಕ್ಕಾಗಿ, ಆಸ್ಪತ್ರೆಯು ಪ್ರಮುಖ ಆರೋಗ್ಯ ವಿಮಾ ಕಂಪನಿ, ಕಾರ್ಪೋರೇಟ್ ಸಾಂಸ್ಥಿಕ  ರಾಜ್ಯ ಮತ್ತು ಕೇಂದ್ರ ಸರ್ಕಾರದ  ಯೋಜನೆಗಳ ಸಹಯೋಗದೊಂದಿಗೆ ನಗದು ರಹಿತ ಚಿಕಿತ್ಸೆಯನ್ನು ನೀಡುತ್ತದೆ. ಯೆನೆಪೊಯ ಆಸ್ಪತ್ರೆಯು ಭಾರತದ ಪ್ರಮುಖ ಆರೋಗ್ಯ ರಕ್ಷಣಾ ಮಾನ್ಯತಾ ಸಂಸ್ಥೆಯಾದ ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ (ಎನ್‌ಎಬಿಹಚ್)ಸಂಪೂರ್ಣ  ಮಾನ್ಯತೆ ಪಡೆದಿದೆ ಎಂದು ಆಸ್ಪತ್ರೆಯ ಸಿಇಒ  ಡಾ.ಸಿ.ಕೆ.ರಂಜನ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಡಾ. ರವಿಚಂದ್ರ, ಡಾ. ಅಶೋಕ್ ಪಂಡಿತ್, ಡಾ. ಅಬ್ದುಲ್ ಜಾವೆದ್, ಡಾ. ದೇವದಾಸ್ ಆಚಾರ್, ಡಾ. ವಿನಾಯಕ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News