ಕೋಶಿಕಾ ಚೇರ್ಕಾಡಿಯ ವತಿಯಿಂದ ನಾಟಕೋತ್ಸವ

Update: 2021-04-07 13:28 GMT

ಬ್ರಹ್ಮಾವರ, ಎ.7: ನಾಟಕ, ಯಕ್ಷಗಾನ ಅಥವಾ ನೃತ್ಯ ಹೀಗೆ ಯಾವ ಕಲೆಯಾದರೂ ಅದು ಭಾವನೆಗಳನ್ನು ಹೊರಹಾಕುವ ಮಾಧ್ಯಮವಾಗಿ ಆಂತರ್ಯವನ್ನು ಶುದ್ಧವಾಗಿರಿಸುತ್ತದೆ. ಅಭಿನಯಿಸುವ ಪಾತ್ರಗಳು ತಮ್ಮನ್ನು ತಾವು ಮರೆತು ಅಭಿನಯಿಸಿದಾಗ ಆತ್ಮಾನಂದ ಪಡೆಯುತ್ತವೆ. ಆಗ ಉದಾತ್ತ ಮನೋಭಾವದ ಆದರ್ಶ ನಡವಳಿಕೆ ತನ್ನಿಂದ ತಾನೇ ಹುಟ್ಟುತ್ತದೆ ಎಂದು ಖ್ಯಾತ ಯಕ್ಷಗಾನ ಪಾತ್ರಧಾರಿಗಳು ಹಾಗೂ ವೈದ್ಯರೂ ಆಗಿರುವ ಡಾ.ಜಯಪ್ರಕಾಶ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ಕೋಶಿಕಾ ಚೇರ್ಕಾಡಿಯ ವತಿಯಿಂದ ಸಾಸ್ತಾನ ಗುಂಡ್ಮಿಯ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ನಡೆದ ಮೂರು ದಿನಗಳ ನಾಟಕೋತ್ಸವದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಂಸ್ಥೆಯನ್ನು ಕಟ್ಟುವುದು ಸುಲಭ.ಆದರೆ ಸತತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತೀ ವರ್ಷ ನಾಟಕೋತ್ಸವ ನಡೆಸಿಕೊಂಡು ಬರುವುದು ಬಹಳ ಕಷ್ಟ ಎಂದ ಅವರು, ಕೋಶಿಕಾ ತನ್ನ ನಾಟಕೋತ್ಸವಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸುತ್ತಾ ಬಂದಿರುವುದು ಕರಾವಳಿ ನೆಲದ ಕಲೆ ಯಕ್ಷಗಾನವನ್ನು ಗೌರವಿಸಿದಂತೆ ಎಂದರು.

ಮತ್ತೊಬ್ಬ ಅತಿಥಿ ಖ್ಯಾತ ಯಕ್ಷಗಾನ ಪ್ರಸಂಗಕರ್ತ ಹಾಗೂ ವೇಷಧಾರಿ ದಿನೇಶ್ ಉಪ್ಪೂರ್ ಅವರು ನಾಟಕೋತ್ಸವಕ್ಕೆ ಶುಭ ಹಾರೈಸಿದರು. ಕಲಾವಿದ ವೈಕುಂಠ ಹೇರ್ಳೆ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಿಕಾ ಸಂಘಟನೆಯ ಭಗವತಿ ಎಂ ಅತಿಥಿಗಳನ್ನು ಅಭಿನಂದಿಸಿದರು.

ಕೊನೆಯಲ್ಲಿ ಯಕ್ಷಗಾನ ಕಲಾಕೇಂದ್ರದ ಕಲಾವಿದರು ಬಬ್ರುವಾಹನ ಎಂಬ ಕಥಾ ಪ್ರಸಂಗವನ್ನು ರಾಜಶೇಖರ ಹೆಬ್ಬಾರರ ನಿರ್ದೇಶನದಲ್ಲಿ ಪ್ರದರ್ಶಿಸಿದರು.

ನಾಟಕೋತ್ಸವವನ್ನು ಮಣಿಪಾಲದ ಮಾಹೆ ಗಾಂಧಿಯನ್ ಅದ್ಯಯನ ಕೇಂದ್ರದ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ಉದ್ಘಾಟಿಸಿದರು. ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ, ಗಿಲಿಗಿಲಿ ಮ್ಯಾಜಿಕ್‌ನ ಜಾದೂಗಾರ ಪ್ರೊ.ಶಂಕರ್, ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜ ಶೇಖರ ಹೆಬ್ಬಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News