"ಚೀನಾದಂತಹ ಸರ್ವಾಧಿಕಾರಿ ಹಾಗೂ ಫ್ಯಾಸಿಸ್ಟ್‌ ದೇಶ ನಿರ್ಮಿಸುವ ಉದ್ದೇಶದಿಂದ ಲಾಕ್‌ ಡೌನ್‌ ಹೇರಲಾಗುತ್ತಿದೆ"

Update: 2021-04-07 14:02 GMT

ಮುಂಬೈ: ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಲಾಕ್ ಡೌನ್ ಹೇರುತ್ತಿರುವ ಸರಕಾರಗಳ ವಿರುದ್ಧ ಉದ್ಯಮಿ ಅನಿಲ್ ಅಂಬಾನಿ ಅವರ ಪುತ್ರ ಅನ್ಮೋಲ್ ಅಂಬಾನಿ ಕಿಡಿಕಾರಿದ್ದಾರಲ್ಲದೆ ಈ ಲಾಕ್ ಡೌನ್‍ಗಳಿಗೂ ಸಾಂಕ್ರಾಮಿಕಕ್ಕೂ ಯಾವುದೇ ಸಂಬಂಧವಿಲ್ಲ, ವಾಸ್ತವಿಕವಾಗಿ ಚೀನಾದಂತಹ ಸರ್ವಾಧಿಕಾರಿ ಹಾಗೂ ಫ್ಯಾಸಿಸ್ಟ್ ದೇಶ ನಿರ್ಮಾಣವೇ ಇದರ ಹಿಂದಿನ ಉದ್ದೇಶ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಕುರಿತು ಅನ್ಮೋಲ್ ಸರಣಿ ಟ್ವೀಟ್ ಮಾಡಿದ್ದಾರೆ. "ಇದು ಆರೋಗ್ಯಕ್ಕೆ ಸಂಬಂಧಿಸಿದ್ದಲ್ಲ, ಇದು ನಮ್ಮ ಜೀವನದ ಪ್ರತಿಯೊಂದು ವಿಷಯದ ನಿಯಂತ್ರಣಕ್ಕೆ ಸಂಬಂಧಿಸಿದ್ದು. ನಮ್ಮಲ್ಲಿ ಹೆಚ್ಚಿನವರು ತಿಳಿದೋ ಅಥವಾ ತಿಳಿಯದೆಯೋ ದೊಡ್ಡ ಷಡ್ಯಂತ್ರದ ಬಲೆಗೆ ಬೀಳುತ್ತಿದ್ದೇವೆ ಎಂದು ನಾನಂದುಕೊಂಡಿದ್ದೇನೆ" ಎಂದು ಅನ್ಮೋಲ್ ಟ್ವೀಟ್ ಮಾಡಿದ್ದಾರೆ

"ಈ ಲಾಕ್‍ ಡೌನ್‍ಗಳು ನಮ್ಮ ಸಮಾಜ ಮತ್ತು ಆರ್ಥಿಕತೆಯನ್ನು ನಾಶಪಡಿಸುತ್ತವೆ. ಅವರು ಸಮಾಜದ  ಮತ್ತು ಆರ್ಥಿಕತೆಯ ಬೆನ್ನೆಲುಬು ನಾಶಪಡಿಸುತ್ತಿದ್ದಾರೆ" ಎಂದು ಬರೆದಿರುವ ಅನ್ಮೋಲ್, ರಾಜಕಾರಣಿಗಳು ಯಾವುದೇ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸದೆ ರ್ಯಾಲಿಗಳನ್ನು ನಡೆಸಬಹುದಾದರೆ ಹಾಗೂ ಕ್ರಿಕೆಟಿಗರಿಗೆ ಐಪಿಎಲ್ ಆಡಬಹುದಾದರೆ ಲಾಕ್ ಡೌನ್ ಹಿಂದಿನ ತರ್ಕವೇನು ಎಂದು ಪ್ರಶ್ನಿಸಿದ್ದಾರೆ. 

"ವೃತ್ತಿಪರ ಕಲಾವಿದರು ತಮ್ಮ ಚಿತ್ರಗಳ ಶೂಟಿಂಗ್ ಮುಂದುವರಿಸಬಹುದು, ವೃತ್ತಿಪರ ಕ್ರಿಕೆಟಿಗರು ತಡರಾತ್ರಿ ತನಕ ಕ್ರಿಕೆಟ್ ಆಡಬಹುದು, ವೃತ್ತಿಪರ ರಾಜಕಾರಣಿಗಳು ಜನಸಾಗರದೊಂದಿಗೆ ರ್ಯಾಲಿ ನಡೆಸಬಹುದು, ಆದರೆ ನಿಮ್ಮ ಉದ್ಯಮ ಅಥವಾ ಕೆಲಸ ಅಗತ್ಯವಲ್ಲ. ಇನ್ನೂ ನಿಮಗೆ ಅರ್ಥವಾಗುತ್ತಿಲ್ಲವೇ?" ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News