ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಯತ್ನಿಸಿದ್ದ ಪ್ರಕರಣ: ಆರೋಪಿಗೆ ಶಿಕ್ಷೆ

Update: 2021-04-07 14:29 GMT

ಮಂಗಳೂರು, ಎ.7: ವ್ಯಕ್ತಿಯೊಬ್ಬ ವಿದೇಶಕ್ಕೆ ತೆರಳಲು ನಕಲಿ ಪಾಸ್‌ಪೋರ್ಟ್ ಬಳಸಿದ ಆರೋಪವು ದ.ಕ.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅಲ್ಲದೆ ಅಪರಾಧಿಗೆ ಒಂದು ವರ್ಷ ಸಾದಾ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಬಂಟ್ವಾಳದ ನಾಸಿರ್ ಹುಸೇನ್ (41) ಶಿಕ್ಷೆಗೊಳಗಾದ ವ್ಯಕ್ತಿ.

ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಈತ ಕೆಲಸ ಕಳೆದುಕೊಂಡಿದ್ದ. ಆದರೆ ಈತ ಕೆಲಸ ಮಾಡುತ್ತಿದ್ದ ಕಂಪನಿ ಈತನ ಪಾಸ್‌ಪೋರ್ಟ್ ಮರಳಿಸಿರಲಿಲ್ಲ. ಹಾಗಾಗಿ ನಾಸಿರ್ ಹುಸೈನ್ ಔಟ್‌ಪಾಸ್ ಪಡೆದು ಭಾರತಕ್ಕೆ ಮರಳಿದ್ದ. ಇದಾಗಿ ಕೆಲ ತಿಂಗಳ ಬಳಿಕ ಮತ್ತೆ ವಿದೇಶಕ್ಕೆ ಹೋಗುವ ಪ್ರಯತ್ನ ಮಾಡಿದ್ದ. ಆದರೆ ಒರಿಜಿಲ್ ಪಾಸ್‌ಪೋರ್ಟ್ ಕೈಯಲ್ಲಿಲ್ಲದ್ದಕ್ಕೆ ಮೊಡಂಕಾಪು ನಿವಾಸಿ ಬಶೀರ್ ಎಂಬಾತನ ವಿಳಾಸದಲ್ಲಿ ನಕಲಿ ಪಾಸ್‌ಪೋರ್ಟ್ ಮಾಡಿಸಿ ಆ ಮೂಲಕ ವಿದೇಶಕ್ಕೆ ತೆರಳಲು ಪ್ರಯತ್ನ ಮಾಡಿದ್ದ.

2009ರ ಮಾ.18ರಂದು ಈತ ಸೌದಿ ಅರೇಬಿಯಾ ದೇಶಕ್ಕೆ ಹೋಗಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ನಿಲ್ದಾಣದ ಎಮಿಗ್ರೇಶನ್ ಅಧಿಕಾರಿಗಳು ಪಾಸ್‌ಪೋರ್ಟ್ ಪರಿಶೀಲಿಸಿದ್ದಾರೆ. ಈ ಸಂದರ್ಭ ನಾಸಿರ್ ಹುಸೈನ್ ಹೊಂದಿದ್ದ ಪಾಸ್ ‌ಪೋರ್ಟ್ ನಕಲಿ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಅಂದು ಎಮಿಗ್ರೇಶನ್ ಅಧಿಕಾರಿಯಾಗಿದ್ದ ಮಂಜುನಾಥ ಶೆಟ್ಟಿ ತನಿಖೆ ನಡೆಸಿದಾಗ ಇದು ನಕಲಿ ಪಾಸ್‌ಪೋರ್ಟ್ ಎಂಬುದು ದೃಢಪಟ್ಟಿತ್ತು.

ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ಬಜ್ಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಮಂಗಳೂರಿನ ಒಂದನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆದರೆ ಆರೋಪಿಯನ್ನು ಈ ಪ್ರಕರಣದಿಂದ ಬಿಡುಗಡೆ ಮಾಡಿ ಆದೇಶಿಸಲಾಗಿತ್ತು.

ಈ ಬಗ್ಗೆ ಸರಕಾರಿ ಅಭಿಯೋಜಕರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಒಂದನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯ ನೀಡಿದ ತೀರ್ಪನ್ನು ರದ್ದುಪಡಿಸಿ ವಂಚನೆ, ಪೋರ್ಜರಿ, ಸುಳ್ಳು ದಾಖಲಾತಿ ಪ್ರಕರಣಗಳು ಹಾಗೂ ಪಾಸ್‌ಪೋರ್ಟ್ ಕಾಯ್ದೆ 12-1 ಎ ಮತ್ತು ಬಿ ಅಡಿಯಲ್ಲಿ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತಿಳಿಸಿದೆ.

ನ್ಯಾಯಾಧೀಶ ಮುರಳೀಧರ್ ಪೈ ಬಿ. ಈ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಸರಕಾರಿ ಅಭಿಯೋಜಕ ರಾಜು ಪೂಜಾರಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News