ಎ.11ರಿಂದ ಪರ್ಕಳ ಪೇಟೆಯಲ್ಲಿ ಕಾಮಗಾರಿ ಆರಂಭ: ಡಿಸಿ ಜಗದೀಶ್
ಉಡುಪಿ, ಎ.7: ಉಡುಪಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಎಗೆ ಸಂಬಂಧಿಸಿ ಪರ್ಕಳ ಪೇಟೆಯಲ್ಲಿ ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ಪಡಿಸಲು 3ಜಿ ಸಿದ್ಧಗೊಂಡಿದ್ದು, ಇದಕ್ಕಾಗಿ ಒಟ್ಟು 21.84 ಕೋಟಿ ರೂ. ಭೂ ಪರಿಹಾರ ಮೊತ್ತ ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಎ.11ರಿಂದ ಪರ್ಕಳ ಪೇಟೆಯಲ್ಲಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಪರ್ಕಳ ವಿಘ್ನೇಶ್ವರ ಸಭಾಭವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಹೆದ್ದಾರಿ 169 ಎಗೆ ಸಂಬಂಧಿಸಿದಂತೆ ಪರ್ಕಳ ಪ್ರದೇಶದ ಭೂಸಂತ್ರಸ್ತರ ಸಭೆಯಲ್ಲಿ ಅವರು ಮಾತನಾಡುತಿದ್ದರು.
ರಸ್ತೆಯ ಮಧ್ಯಭಾಗದಿಂದ ಎರಡು ಇಕ್ಕೇಲಗಳಲ್ಲಿ ತಲಾ 15ಮೀಟರ್ ಅಗಲ ಭೂಸ್ವಾಧೀನ ಮಾಡಿಕೊಳ್ಳಲಾಗುವುದು. ಆದುದರಿಂದ ಸಂತ್ರಸ್ತರು ತಮ್ಮ ತಮ್ಮ ಜಾಗದಲ್ಲಿರುವ ಮರ ಹಾಗೂ ಕಟ್ಟಡಗಳನ್ನು ತಾವುಗಳೇ ಶೀಘ್ರ ತೆರವು ಗೊಳಿಸಬೇಕು. ಅವಶ್ಯಕತೆ ಇದ್ದಲ್ಲಿ ಇದಕ್ಕೆ ಜಿಲ್ಲಾಡಳಿತ ಹಾಗೂ ಇಲಾಖೆಯ ಕೂಡ ನೆರವು ನೀಲಿದೆ ಎಂದರು.
ಪರಿಹಾರಕ್ಕಾಗಿ ನೋಟೀಸ್ ನೀಡಿದ 30 ದಿನಗಳಲ್ಲಿ ಅಗತ್ಯ ದಾಖಲಾತಿ ಗಳನ್ನು ನೀಡಿ ಪರಿಹಾರ ಪಡೆಯಬಹುದು. ಈ ಪರಿಹಾರ ಮೊತ್ತದಲ್ಲಿ ತೃಪ್ತಿ ಇಲ್ಲದಿದ್ದರೆ ಈ ಸಂಬಂಧ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗೆ ಹೆಚ್ಚಿನ ಪರಿಹಾರ ನೀಡುವಂತೆ 45 ದಿನಗಳ ಒಳಗೆ ಮನವಿ ಸಲ್ಲಿಸಲು ಅವಕಾಶ ಇದೆ. ಒಂದು ತಿಂಗಳೊಳಗೆ ದಾಖಲೆ ಸಲ್ಲಿಸದಿದ್ದರೆ ಅಂತವರ ಹಣವನ್ನು ಕೋರ್ಟ್‌ಗೆ ಡಿಪಾಸಿಟ್ ಮಾಡಲಾ ಗುವುದು. ಮುಂದೆ ಸಂತ್ರಸ್ತರು ಅಲ್ಲಿಂದಲೇ ಹಣ ಪಡೆುಬೇಕು ಎಂದು ಅವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್ ನಾಯಕ್ ಮಾತನಾಡಿ, ಈ ಪ್ರಕ್ರಿಯೆ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದೆಯೇ ಹೊರತು ಹಣಕಾಸಿನ ಸಮಸ್ಯೆಯಿಂದ ಅಲ್ಲ. ಸಂತ್ರಸ್ತರು ಜಾಗ ಬಿಟ್ಟುಕೊಟ್ಟ ಕೂಡಲೇ ಕೆಲಸ ಆರಂಭಿ ಸಲು ಸಹಕಾರ ನೀಡಬೇಕು. ಮಣಿಪಾಲದಿಂದ ಪರ್ಕಳವರೆಗಿನ 7ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಲ್ಲಿ 6.10ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಪರ್ಕಳ ಪೇಟೆಯಲ್ಲಿ 900 ಮೀಟರ್‌ನಷ್ಟು ಕಾಮಗಾರಿ ಬಾಕಿ ಇದೆ ಎಂದರು.
ಸಭೆಯಲ್ಲಿ ಉಡುಪಿ ಶಾಸಕ ಕೆ.ರಘುಪತಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಪೌರಾಯುಕ್ತ ಡಾ.ಉದಯ ಶೆಟ್ಟಿ, ರಾ.ಹೆ. ಇಲಾಖೆಯ ಸಹಾಯಕ ಅಭಿಯಂತರ ಮಂಜುನಾಥ್ ನಾಯಕ್ ಉಪಸ್ಥಿತರಿದ್ದರು.
ಯಥಾಸ್ಥಿತಿ ಆದೇಶ: ಡಿಸಿ ಗಮನಕ್ಕೆ ತಂದ ಸಂತ್ರಸ್ತರು
ಸಭೆ ಮುಗಿಸಿ ಸಭಾಂಗಣದಿಂದ ಹೊರಬಂದ ಜಿಲ್ಲಾಧಿಕಾರಿಯನ್ನು ಭೇಟಿ ಯಾದ ಕೆಲವು ಭೂಸಂತ್ರಸ್ತರು, ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸ ದಂತೆ ಹಾಗೂ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಆದೇಶ ನೀಡಿದೆ ಎಂಬುದಾಗಿ ತಿಳಿಸಿದರು.
ಇದರ ಪ್ರತಿಯನ್ನು ಈಗಾಗಲೇ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲಾಗಿದೆ. ಹೀಗೆ ಇರುವಾಗ ಸಭೆ ನಡೆಸಿರುವುದು ಸರಿಯಲ್ಲ ಎಂದು ಭೂ ಸಂತ್ರಸ್ತರು ಜಿಲ್ಲಾಧಿಕಾರಿಯವರಲ್ಲಿ ಹೇಳಿಕೊಂಡರು. ಕಚೇರಿಗೆ ಆದೇಶದ ಪ್ರತಿ ಬಂದಿ ರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದ ಜಿಲ್ಲಾಧಿಕಾರಿ ಸಂತ್ರಸ್ತರಿಗೆ ಭರವಸೆ ನೀಡಿದರು. ಇದರಿಂದ ಇದೀಗ ಸಭೆ ಹಾಗೂ ಕಾಮಗಾರಿ ಆರಂಭಿ ಸುವ ಬಗ್ಗೆ ಸಾರ್ವಜನಿಕವಾಗಿ ಮತ್ತೆ ಗೊಂದಲ ಉಂಟಾಗಿದೆ.