ರಾತ್ರಿಯ ವೇಳೆ ತೆರದ ಬೆಳ್ಮ ಪಂಚಾಯತ್ : ಕೊಣಾಜೆ ಠಾಣೆಗೆ ದೂರು

Update: 2021-04-07 17:16 GMT

ಕೊಣಾಜೆ: ದೇರಳಕಟ್ಟೆಯಲ್ಲಿರುವ ಬೆಳ್ಮ ಗ್ರಾಮ ಪಂಚಾಯತ್ ಕಾರ್ಯಾಲಯವು ಸೋಮವಾರ ರಾತ್ರಿ‌ ತೆರೆದುಕೊಂಡಿದ್ದು ಮಾತ್ರವಲ್ಲದೆ  ಇಬ್ಬರು ಪಂಚಾಯತ್ ಸಿಬ್ಬಂದಿಗಳು ಸೇರಿ ಮೂವರು ಕಚೇರಿಯೊಳಗಿದ್ದು ಈ ಬಗ್ಗೆ ಸೂಕ್ತ ತನಿಖೆ‌ ನಡೆಸಬೇಕೆಂದು ಒತ್ತಾಯಿಸಿ‌  ಸ್ಥಳೀಯ ಗ್ರಾಮಸ್ಥರೊಬ್ಬರು ಕೊಣಾಜೆ‌ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೇರಳಕಟ್ಟೆ ನಿವಾಸಿ ಪ್ರಶಾಂತ್ ರಾಣೆಯರ್ ದೂರು‌ ನೀಡಿದ್ದಾರೆ. ಅವರು ಬೆಳ್ಮ ಪಂಚಾಯತ್ ಸಮೀಪವಿರುವ ಅಯ್ಯಪ್ಪ ಸ್ವಾಮಿ ದೇವಳಕ್ಕೆ ಹೋಗುತ್ತಿದ್ದಾಗ ಪಂಚಾಯತ್ ನ ಬಾಗಿಲು ತೆರೆದು‌ಕೊಂಡಿದ್ದನ್ನು ಗಮನಿಸಿದ್ದರು. ಹಾಗೂ ಅಲ್ಲಿ ಪಂಚಾಯತ್ ಸಿಬ್ಬಂದಿಗಳಾದ ನಿತಿನ್ ಹಾಗೂ ಕಮಾಲ್ ಎಂಬವರು ಯಾವುದೋ ಕೆಲಸದಲ್ಲಿದ್ದರು. ಹಾಗೂ ಈ ಸಂದರ್ಭದಲ್ಲಿ ಓರ್ವ ಬಾಲಕ ಕೂಡಾ ಅಲ್ಲಿದ್ದ ಎಂದು ಪ್ರಶಾಂತ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ರಾತ್ರಿಯ ವೇಳೆ ಪಂಚಾಯತ್ ತೆರೆದು  ಕೆಲಸ ಮಾಡುತ್ತಿದ್ದ ಬಗ್ಗೆ  ಅನುಮಾನ ವ್ಯಕ್ತಪಡಿಸಿರುವ ಅವರು ಈ ಬಗ್ಗೆ ಪಂಚಾಯತ್ ಪಿಡಿಒ ಹಾಗೂ ಅಧ್ಯಕ್ಷರನ್ನು ಕರೆಸಿ ವಿಚಾರಣೆ , ತನಿಖೆ ನಡೆಸಬೇಕೆಂದು ಅವರು‌ ಒತ್ತಾಯಿಸಿದ್ದಾರೆ.

ಅರ್ ಡಿಪಿಆರ್ ಸಚಿವರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಪಂಚಾಯತ್ ನ ಅಗತ್ಯ ವರದಿಗಳನ್ನು  ಜಿಲ್ಲಾ ಪಂಚಾಯತ್ ಗೆ ಕಳುಹಿಸಿಕೊಡಲು ಸೋಮವಾರ ಸಂಜೆ ಅಧಿಕಾರಿಗಳು ತಿಳಿಸಿದ ಕಾರಣ ಪಂಚಾಯತ್ ಸಿಬ್ಬಂದಿಗಳು 8.15 ರ ವರೆಗೆ ಪಂಚಾಯತ್ ತೆರದು ವರದಿಗಳನ್ನು ಕಳುಹಿಸಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಬೆಳ್ಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಸತ್ತಾರ್ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟೀಕರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News