ಕೆಂಪು ಸಮುದ್ರದಲ್ಲಿ ಇರಾನ್‌ನ ಸರಕು ಹಡಗಿನ ಮೇಲೆ ದಾಳಿ

Update: 2021-04-07 17:18 GMT

ರಿಯಾದ್ (ಸೌದಿ ಅರೇಬಿಯ), ಎ. 7: ಯೆಮನ್ ಕರಾವಳಿಗೆ ಹೊಂದಿಕೊಂಡ ಕೆಂಪು ಸಮುದ್ರದಲ್ಲಿರುವ ಇರಾನ್‌ನ ಸರಕು ಹಡಗೊಂದರ ಮೇಲೆ ದಾಳಿ ನಡೆದಿದೆ. ಈ ಹಡಗು, ಇರಾನ್‌ನ ಅರೆಸೈನಿಕ ಪಡೆ ರೆವಲೂಶನರಿ ಗಾರ್ಡ್‌ನ ನೆಲೆ ಎಂಬುದಾಗಿ ಭಾವಿಸಲಾಗಿದ್ದು, ಹಲವು ವರ್ಷಗಳಿಂದ ಕೆಂಪು ಸಮುದ್ರದಲ್ಲಿ ಲಂಗರು ಹಾಕಿತ್ತು.

ಹಡಗಿನ ಮೇಲೆ ದಾಳಿ ನಡೆದಿರುವುದನ್ನು ಇರಾನ್‌ನ ವಿದೇಶ ಸಚಿವಾಲಯ ಬುಧವಾರ ಖಚಿತಪಡಿಸಿದೆ. ಸ್ಥಳೀಯ ಸಮಯ ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆಯ ವೇಳೆಗೆ ಡಿಜಿಬೂಟಿ ನಗರದ ತೀರಕ್ಕೆ ಹೊಂದಿಕೊಂಡಿರುವ ಕೆಂಪು ಸಮುದ್ರದ ಭಾಗದಲ್ಲಿ ಲಂಗರು ಹಾಕಿದ್ದ ಎಂವಿ ಸವೀಝ್ ಹಡಗಿಗೆ ಸ್ಫೋಟಕವೊಂದು ಅಪ್ಪಳಿಸಿತು ಎಂದು ವಿದೇಶ ಸಚಿವಾಲಯದ ವಕ್ತಾರ ಸಯೀದ್ ಖತೀಬ್‌ಝಾದೆ ಹೇಳಿದರು. ದಾಳಿಯಿಂದಾಗಿ ಹಡಗಿಗೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ ಎಂದರು.

ಎಂವಿ ಸವೀಝ್ ಸೇನಾಯೇತರ ಹಡಗಾಗಿದ್ದು ಅಂತರ್‌ರಾಷ್ಟ್ರೀಯ ಸಾಗರಮಾರ್ಗ ಸಂಘಟನೆಯಲ್ಲಿ ಔಪಚಾರಿಕವಾಗಿ ನೋಂದಾಯಿಸಲಾಗಿದೆ ಎಂದು ಸಯೀದ್ ಹೇಳಿದರು. ಅದು ಕೆಂಪು ಸಮುದ್ರದಲ್ಲಿ ಇರಾನ್‌ನ ‘ಲಾಜಿಸ್ಟಿಕ್ ಸ್ಟೇಶನ್’ ಆಗಿ ಕೆಲಸ ಮಾಡುತ್ತಿದ್ದು ಕಡಲ್ಗಳ್ಳತನ ನಿಗ್ರಹ ಸೇವೆಯನ್ನು ಒದಗಿಸುತ್ತಿದೆ ಎಂದರು.

‘‘ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಘಟನೆ ಹೇಗೆ ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ’’ ಎಂದು ವಿದೇಶ ಸಚಿವಾಲಯದ ವಕ್ತಾರ ನುಡಿದರು.

ಯೆಮನ್‌ನಲ್ಲಿನ ಆಂತರಿಕ ಯುದ್ಧದಲ್ಲಿ ಅಲ್ಲಿನ ಹೌದಿ ಬಂಡುಕೋರರಿಗೆ ಇರಾನ್ ಶಸ್ತ್ರಗಳನ್ನು ಪೂರೈಸುತ್ತಿದೆ ಎಂಬುದಾಗಿ ವಿಶ್ವಸಂಸ್ಥೆ ಮತ್ತು ಪಾಶ್ಚಿಮಾತ್ಯ ದೇಶಗಳು ಆರೋಪಗಳನ್ನು ಮಾಡುತ್ತಿರುವಂತೆಯೇ, ಈ ಹಡಗು ಈ ಪ್ರದೇಶದಲ್ಲಿ ಸುದೀರ್ಘ ಸಮಯದಿಂದ ಲಂಗರು ಹಾಕಿದೆ.

ಇಸ್ರೇಲ್ ದಾಳಿ ನಡೆಸಿತೇ?

ಎಂವಿ ಸವೀಝ್ ಹಡಗಿನ ಮೇಲೆ ದಾಳಿ ನಡೆಸುವುದಾಗಿ ಇಸ್ರೇಲ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ ಎಂದು ಇರಾನ್‌ನ ಸರಕಾರಿ ಟಿವಿಯೊಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News