ಸಿಆರ್‌ಪಿಎಫ್ ಸಿಬ್ಬಂದಿ ತೊಂದರೆ ಸೃಷ್ಟಿಸಲು ಯತ್ನಿಸಿದರೆ ಘೇರಾವ್ ಮಾಡಿ: ಮಹಿಳೆಯರಿಗೆ ಮಮತಾ ಕರೆ

Update: 2021-04-08 04:44 GMT

ಕೂಚ್‌ಬೆಹರ್: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸುವಂತೆ ಕೇಂದ್ರೀಯ ಭದ್ರತಾ ಪಡೆಗಳು ಜನರಿಗೆ ಒತ್ತಡ ಹಾಕುತ್ತಿವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಸಿಆರ್‌ಪಿಎಫ್ ಸಿಬ್ಬಂದಿ ತೊಂದರೆ ಸೃಷ್ಟಿಸಲು ಯತ್ನಿಸಿದರೆ ಘೇರಾವ್ ಮಾಡಿ ಎಂದು ಅವರು ಜನತೆಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಕರೆ ನೀಡಿದ್ದಾರೆ.

"ಸಿಆರ್‌ಪಿಎಫ್ ತೊಂದರೆ ಸೃಷ್ಟಿಸಿದರೆ, ಒಂದು ಗುಂಪು ಸಿಆರ್‌ಪಿಎಫ್ ಸಿಬ್ಬಂದಿಗೆ ಮುತ್ತಿಗೆ ಹಾಕಬೇಕು ಹಾಗೂ ಇನ್ನೊಂದು ಗುಂಪು ಮುನ್ನುಗ್ಗಿ ಮತದಾನ ಮಾಡಬೇಕು" ಎಂದು ಕೂಚ್‌ಬೆಹರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಸಲಹೆ ಮಾಡಿದರು.

"ನಿಮ್ಮ ಮತ ವ್ಯರ್ಥ ಮಾಡಬೇಡಿ. ನೀವೆಲ್ಲರೂ ಘೆರಾವ್ ಮಾಡಿದರೆ ನಿಮ್ಮ ಮತ ವ್ಯರ್ಥವಾಗುತ್ತದೆ. ಬಿಜೆಪಿಗೆ ಅದೇ ಬೇಕಿರುವುದು" ಎಂದರು.

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಜಿಲ್ಲಾಡಳಿತದಿಂದ ವರದಿ ಕೇಳಿದೆ. "ಶಾಂತಿಯುತ ಮತದಾನ ನನ್ನ ಬಯಕೆ. ಜನ ತಮ್ಮ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಬೇಕು. ಸಿಆರ್‌ಪಿಎಫ್ ಸಿಬ್ಬಂದಿ ಜನರನ್ನು ಮತದಾನ ಮಾಡದಂತೆ ತಡೆಯಬಾರದು. ಬಿಜೆಪಿಗೆ ಮತ ಹಾಕಿ ಎಂದು ಹೇಳಲು ಕೇಂದ್ರೀಯ ಪಡೆಗಳಿಗೆ ಯಾರು ಸೂಚಿಸಿದ್ದಾರೆ ? ಮೋದಿ ಅಥವಾ ದೀದಿ ಎಂದು ಕೇಳಲು ಯಾರು ಹೇಳಿದ್ದಾರೆ ? ನೈಜ ಸೈನಿಕರನ್ನು ನಾನು ಗೌರವಿಸುತ್ತೇನೆ ಆದರೆ ಮಹಿಳೆಯರ ಮೇಲೆ ಹಲ್ಲೆ ಮಾಡಿ ಜನರಿಗೆ ಕಿರುಕುಳ ನೀಡುವ ಬಿಜೆಪಿ ಸಿಆರ್‌ಪಿಎಫ್ ಪಡೆಯನ್ನಲ್ಲ" ಎಂದು ಮಮತಾ ಹೇಳಿದರು.

ಮಮತಾ ಹೇಳಿಕೆ ಬೆನ್ನಲ್ಲೇ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ನಮ್ಮದೇ ಭದ್ರತಾ ಪಡೆಗಳ ವಿರುದ್ಧ ಹೇಳಿಕೆ ನೀಡುವುದು ದೇಶದ್ರೋಹ ಕೃತ್ಯ ಎಂದು ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News