×
Ad

ಮುಸ್ಲಿಂ ಲೀಗ್‌ ಕಾರ್ಯಕರ್ತನ ಕೊಲೆ ಪ್ರಕರಣ: ಕಣ್ಣೂರಿನಲ್ಲಿ 10ಕ್ಕೂ ಹೆಚ್ಚು ಸಿಪಿಎಂ ಕಚೇರಿಗಳಿಗೆ ದಾಳಿ

Update: 2021-04-08 16:08 IST

ಕಣ್ಣೂರು: ವಿಧಾನಸಭಾ ಚುನಾವಣೆಯ ಬಳಿಕ ಭುಗಿಲೆದ್ದ ಗಲಭೆಯಲ್ಲಿ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ನ ಕಾರ್ಯಕರ್ತ ಮೃತಪಟ್ಟ ಬಳಿಕ ಕಣ್ಣೂರಿನಲ್ಲಿ ಎಡ ಪಕ್ಷಗಳಿಗೆ ಸೇರಿದ ೧೦ಕ್ಕೂ ಹೆಚ್ಚು ಕಚೇರಿಗಳನ್ನು ಧ್ವಂಸ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪ್ರತಿಭಟನೆ ನಿಯಂತ್ರಣಕ್ಕೆ ಬರದ ಕಾರಣ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ ಎಂದು pti ವರದಿ ಮಾಡಿದೆ.

ಯುಡಿಎಫ್‌ ನ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಸ್ಲಿಂ ಲೀಗ್‌ ಕಾರ್ಯಕರ್ತ ಮನ್ಸೂರ್‌ ಹಾಗೂ ಆತನ ಸಹೋದರನ ಮೇಲೆ ಸಿಪಿಎಂ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆಂದು ಮುಸ್ಲಿಂ ಲೀಗ್‌ ಆರೋಪಿಸಿತ್ತು. ಅವರಿಬ್ಬರ ಮೇಲೆ ಬಾಂಬ್‌ ಕೂಡಾ ಎಸೆದಿದ್ದಾರೆಂದು ಆರೋಪ ವ್ಯಕ್ತಪಡಿಸಿತ್ತು. ಆದರೆ ಈ ಆರೋಪಗಳನ್ನು ಕಮ್ಯೂನಿಸ್ಟ್‌ ಪಕ್ಷ ನಿರಾಕರಿಸಿತ್ತು.

ಬುಧವಾರದಂದು ಮನ್ಸೂರ್‌ ಅಂತ್ಯಕ್ರಿಯೆಯ ಬಳಿಕ ಮುಸ್ಲಿಂ ಲೀಗ್‌ ನ ಕೆಲ ಕಾರ್ಯಕರ್ತರು ಸಿಪಿಎಂ ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಮೂರು ಪೊಲೀಸರು ಗಾಯಗೊಂಡು ಪೊಲೀಸ್‌ ಬಸ್‌ ಒಂದಕ್ಕೆ ಹಾನಿಯಾಗಿತ್ತು. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವವರ ಮೇಲೂ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾಗಿ ಪಿಟಿಐ ತಿಳಿಸಿದೆ.

ಕಣ್ಣೂರು ಸಮೀಪದ ಚೊಕ್ಲಿ, ಆಚಿಮುಕ್ಕ್‌, ಕೀಳ್ಮಡಂ, ಕೊಲವೆಲ್ಲೂರು ಸೇರಿದಂತೆ ಹಲವು ಕಡೆಗಳಲ್ಲಿ ಸಿಪಿಎಂ ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News