ಎ.9: ಯಶವಂತಪುರ-ಕಾರವಾರ ನಡುವೆ ವಿಶೇಷ ರೈಲು

Update: 2021-04-08 14:42 GMT
ಸಾಂದರ್ಭಿಕ ಚಿತ್ರ

ಉಡುಪಿ, ಎ.8: ಕೊಂಕಣ ರೈಲ್ವೆಯ ಸಹಕಾರದೊಂದಿಗೆ ದಕ್ಷಿಣ ಪಶ್ಚಿಮ ರೈಲ್ವೆಯು ಯಶವಂತಪುರ-ಕಾರವಾರ-ಯಶವಂತಪುರ ನಡುವೆ ಎ.9 ಮತ್ತು 10ರಂದು ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ. ಮುಂಬರುವ ಯುಗಾದಿ ಹಬ್ಬದ ಪ್ರಯುಕ್ತ ಜನರ ಬೇಡಿಕೆಯ ಹಿನ್ನೆಲೆಯಲ್ಲಿ ಈ ರೈಲನ್ನು ಓಡಿಸಲಾಗುತ್ತಿದೆ.

ರೈಲು ನಂ.06513 ಯಶವಂತಪುರ-ಕಾರವಾರ ವಿಶೇಷ ರೈಲು (ಪೂರ್ತಿ ಕಾದಿರಿಸಿದ) ಎ.9ರ ರಾತ್ರಿ 11:45ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಮರುದಿನ ಅಪರಾಹ್ನ 3:40ಕ್ಕೆ ಕಾರವಾರ ತಲುಪಲಿದೆ. ಅದೇ ರೀತಿ ರೈಲು ನಂ.06514 ಕಾರವಾರ- ಯಶವಂತಪುರ ವಿಶೇಷ ರೈಲು (ಪೂರ್ತಿ ಕಾದಿರಿಸಿದ) ಎ.10ರ ಶನಿವಾರ ಸಂಜೆ 4:10ಕ್ಕೆ ಕಾರವಾರದಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 11:15ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ.

ಈ ರೈಲಿಗೆ ಕುಣಿಗಲ್, ಬಿ.ಜಿ.ನಗರ, ಶ್ರವಣಬೆಳಗೊಳ, ಚೆನ್ನರಾಯಪಟ್ಟಮ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಮಂಗಳೂರು ಜಂಕ್ಷನ್, ಸುರತ್ಕಲ್, ಮುಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟ, ಗೋಕರ್ಣ ರೋಡ್ ಹಾಗೂ ಅಂಕೋಲ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.ಪ್ರಯಾಣಿಕರು ಕೋವಿಡ್-19ಕ್ಕೆ ಸಂಬಂಧಿಸಿದ ಎಲ್ಲಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.

ಈ ರೈಲು ಒಟ್ಟು 14 ಕೋಚ್‌ಗಳನ್ನು ಹೊಂದಿರುತ್ತದೆ. 2ಟಯರ್ ಎಸಿ-1, 3ಟಯರ್ ಎಸಿ-1, ಸ್ಲೀಪರ್-7 ಕೋಚ್, ಸೆಕೆಂಡ್ ಸೀಟಿಂಗ್-3, ಜನರೇಟರ್ ಕಾರ್-2 ಕೋಚ್‌ಗಳನ್ನು ಹೊಂದಿರುತ್ತದೆ.

ರೈಲು ನಂ.06514 ಕಾರವಾರ-ಯಶವಂತಪುರ ವಿಶೇಷ ರೈಲಿಗೆ ಮುಂಗಡ ಟಿಕೇಟ್ ಬುಕ್ಕಿಂಗ್ ಎ.9ರಂದು ಪ್ರಾರಂಭಗೊಳ್ಳಲಿದೆ. ಎಲ್ಲಾ ಪಿಆರ್‌ಎಸ್ ಕೌಂಟರ್‌ಗಳಲ್ಲಿ, ಐಆರ್‌ಸಿಟಿಸಿ ವೆಬ್‌ಸೈಟ್‌ಗಳಲ್ಲಿ ಬುಕ್ಕಿಂಗ್ ಲಭ್ಯವಿದೆ ಎಂದು ಕೊಂಕಣ ರೈಲ್ವೆಯ ಡಿಜಿಎಂ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಆರ್.ಕರ್ನಾಡಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News