×
Ad

ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರು ಮೃತ್ಯು

Update: 2021-04-08 20:39 IST

ಮಂಗಳೂರು, ಎ.8: ನಗರ ಹೊರ ವಲಯದ ಕಣ್ಣೂರು ಹಾಗೂ ಮೂಡುಬಿದಿರೆ ಬಳಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಕಣ್ಣೂರು ಗ್ರಾಮದ ಶ್ರೀಲಕ್ಷ್ಮೀನಾರಾಯಣ ಸಭಾ ಭವನದ ಬಳಿ ಗುರುವಾರ ಬೆಳಗ್ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ನಾಗಮ್ಮ (55) ಎಂಬವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ತಾಜುದ್ದೀನ್ ಎಂಬಾತ ಚಲಾಯಿಸಿಕೊಂಡು ಬಂದ ಕಾರು ರಸ್ತೆ ದಾಟುತ್ತಿದ್ದ ನಾಗಮ್ಮಗೆ ಢಿಕ್ಕಿ ಹೊಡೆಯಿತು. ಇದರಿಂದ ನಾಗಮ್ಮ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡರು. ತಕ್ಷಣ ಅಪಘಾತವಾದ ಕಾರಿನಲ್ಲೇ ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ಆದರೆ ಅಷ್ಟರಲ್ಲೇ ನಾಗಮ್ಮ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡುಬಿದಿರೆಯ ಆಲಂಗಾರಿನಿಂದ ಜಯ ವಿ.ಶೆಟ್ಟಿ (45) ಎಂಬವರು ಕೆಸರುಗದ್ದೆಯಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ.

ಮೂಡುಬಿದಿರೆಯಿಂದ ಕಾರ್ಕಳ ಕಡೆಗೆ ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಬಸ್ ಢಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣ ಅವರನ್ನು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ಪರೀಕ್ಷಿಸಿದ ವೈದ್ಯಾಧಿಕಾರಿ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್‌ಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಆದರೆ ವೆನ್ಲಾಕ್‌ನಲ್ಲಿ ಚಿಕಿತ್ಸೆಯಲ್ಲಿದ್ದಾಗ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News