ಕುಂದಾಪುರ ಮೇಲ್ಸೆತ್ಸುವೆ ಎ.20ರೊಳಗೆ ವಾಹನ ಸಂಚಾರಕ್ಕೆ ಮುಕ್ತ: ನವಯುಗ ಅಧಿಕಾರಿಗಳಿಂದ ಮಾಹಿತಿ
ಕುಂದಾಪುರ, ಎ.8: ಕುಂದಾಪುರ ನಗರದ ಮೇಲ್ಸೆತುವೆ ಕಾಮಗಾರಿ ಪೂರ್ಣ ಗೊಂಡಿದ್ದು, ಎ.15ರಿಂದ 20ರೊಳಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗು ವುದು ಎಂದು ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪೆನಿಯ ಅಧಿಕಾರಿಗಳು ಬುಧವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು.
ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಚಂದ್ರಶೇಖರ್ ಖಾರ್ವಿ, ನಗರದ ಮೇಲ್ಸೇತುವೆ ಕಾಮಗಾರಿ ದಶಕ ಕಳೆದರೂ ಪೂರ್ಣಗೊಂಡಿಲ್ಲ. ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ಹೇಳಿದರೂ ಇನ್ನು ಪೂರ್ಣಗೊಳಿಸಿಲ್ಲ ಎಂದು ದೂರಿದರು.
ತೆರಿಗೆ ಸಮಸ್ಯೆ ಬಗ್ಗೆ ಚರ್ಚೆ: ತೆರಿಗೆ ಸಮಸ್ಯೆ ಬಗ್ಗೆ ಪ್ರಶ್ನಿಸಿದ ಸದಸ್ಯ ಚಂದ್ರಶೇಖರ್ ಖಾರ್ವಿ, ಪುರಸಭೆಯು ಜನರಿಗೆ ಹೊರೆಯಾಗುವ ನಿರ್ಣಯ ಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ನೀವು ಸರಕಾರದ ಪರ ಆಡಳಿತ ನಡೆಸುತ್ತಿದ್ದೀರಿ ಹೊರತು ಜನಪರ ಆಡಳಿತವನ್ನು ನಡೆಸುತ್ತಿಲ್ಲ. ಆದುದರಿಂದ ಜನರಿಗೆ ತುಂಬಾ ಸಮಸ್ಯೆಯಾಗುವ ಈ ತೇರಿಗೆಯನ್ನು ಮತ್ತೊಮ್ಮೆ ಪರಿಷ್ಕರಿಸ ಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಸದಸ್ಯ ಗಿರೀಶ್, ತೆರಿಗೆ ಪರಿಷ್ಕರಣೆಯ ಸುತ್ತೋಲೆ ಬಂದಾಗ ಅಧಿಕಾರಿಗಳು ಆ ಬಗ್ಗೆ ಸವಿವರ ಮಾಹಿತಿ ನೀಡುವಾಗ ವಿರೋಧ ಪಕ್ಷದವರು ಸಭಾತ್ಯಾಗ ಮಾಡಿ ಹೊರಟು ಹೋಗಿದ್ದರು. ಈಗ ಜನರ ಪರ ನಾವಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.
ಹಿರಿಯ ಸದಸ್ಯ ಮೋಹನ್ ಶೆಣೈ ಮಾತನಾಡಿ, ವಿರೋಧ ಪಕ್ಷದವನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೆರಿಗೆ ಕುರಿತು ಚರ್ಚಿಸಲು ವಿಶೇಷ ಸಭೆ ನಡೆಸಬೇಕು ಎಂದು ಅಭಿಪ್ರಾಯ ಪಟ್ಟರು.
ಫಲಕ ಅಳವಡಿಸಿದರೆ ಕ್ರಮ: ಸದಸ್ಯ ಗಿರೀಶ್ ಜಿ.ಕೆ ಮಾತನಾಡಿ, ಕುಂದಾಪುರ ನಗರದಾದ್ಯಂತ ಪಾರ್ಕಿಂಗ್ ಸಮಸ್ಯೆ ಇದ್ದು, ಪುರಸಭೆ ಜಾಗದಲ್ಲಿ ಖಾಸಗಿ ಕಟ್ಟಡದವರು ನೋ ಪಾರ್ಕಿಂಗ್ ಎಂಬ ಬೋರ್ಡ್ ಹಾಕುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಖಾಸಗಿ ಜಾಗದವರು ಪಾರ್ಕಿಂಗ್‌ಗೆ ಶೇ.1ರಷ್ಟು ಜಾಗವನ್ನು ಪುರಸಭೆಗೆ ಬಿಟ್ಟು ಕೊಡಬೇಕು. ಅದು ರಸ್ತೆ ಅಗಲೀಕರಣಕ್ಕೆ ಹಾಗೂ ಸೆಟ್ಬ್ಯಾಗ್ ಬಳಸಲಾಗು ವುದು. ಆದರೆ ಅದು ಖಾಸಗಿ ಅವರ ಒಡೆತನ ದಲ್ಲಿಯೇ ಇರುತ್ತದೆ. ಅನಾವಶ್ಯಕ ಫಲಕ ಅಳವಡಿಸಿದವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.