ಉಡುಪಿಯಲ್ಲಿ ಮುಂದುವರೆದ ಕೆಎಸ್‌ಆರ್‌ಟಿಸಿ ಬಸ್ ನೌಕರರ ಮುಷ್ಕರ
ಉಡುಪಿ, ಎ.8: ಕೆಎಸ್‌ಆರ್‌ಟಿಸಿ ಬಸ್ ನೌಕರರ ಮುಷ್ಕರ ಇಂದು ಕೂಡ ಉಡುಪಿ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಮುಂದುವರೆದಿದ್ದು, ಬೆಂಗಳೂರು ಮತ್ತು ಮಲ್ಪೆಗೆ ಒಂದು ನರ್ಮ್ ಬಸ್ ಬಿಟ್ಟರೆ ಉಳಿದಂತೆ ಯಾವುದೇ ಬಸ್‌ಗಳು ಓಡಾಟ ನಡೆಸಿಲ್ಲ.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಳೆದ ರಾತ್ರಿಯಿಂದ ಹುಬ್ಬಳ್ಳಿ, ಬೆಳಗಾವಿಗೆ ತೆರಳುವ ಪ್ರಯಾಣಿಕರಿಗಾಗಿ ಎರಡು ಖಾಸಗಿ ಬಸ್‌ಗಳು ಬೀಡು ಬಿಟ್ಟಿವೆ. ಆದರೆ ಪ್ರಯಾಣಿಕರಿಲ್ಲದೆ ಮಧ್ಯಾಹ್ನದವರೆಗೆ ಆ ಬಸ್‌ಗಳು ನಿಲ್ದಾಣ ದಲ್ಲಿಯೇ ಉಳಿದುಕೊಂಡಿರುವುದು ಕಂಡುಬಂದಿವೆ.
ಅಂಕೋಲಾ, ಹಾಸನ, ಶಿರಸಿ ಕಡೆ ತೆರಳುವ ಕೆಲವು ಪ್ರಯಾಣಿಕರು ಸರಕಾರಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವುದು ಕಂಡುಬಂದಿದ್ದು, ಇವರಿಗೆ ಖಾಸಗಿ ಬಸ್ ಮಾಲಕರು ಬೆಂಗಳೂರು, ಹುಬ್ಬಳ್ಳಿ ಕಡೆ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟರು.
ಬೆಳಗ್ಗೆ ಉಡುಪಿಯಿಂದ ಬೆಂಗಳೂರಿಗೆ ಒಂದು ಬಸ್ ಹೊರಟಿದೆ. ಅದೇ ರೀತಿ ನರ್ಮ್ ಬಸ್ ಒಂದು ಮಲ್ಪೆಗೆ ಓಡಾಟ ನಡೆಸಿದೆ. ಅದು ಬಿಟ್ಟರೆ ಉಳಿದ ಯಾವುದೇ ಬಸ್‌ಗಳು ರಸ್ತೆಗೆ ಇಳಿದಿಲ್ಲ. ನಿನ್ನೆಯ ಮುಷ್ಕರದಿಂದ ಅಲ್ಲಲ್ಲಿ ಸಿಲುಕಿ ಕೊಂಡ ಉಡುಪಿಗೆ ಬರಬೇಕಾದ 23 ಬಸ್‌ಗಳ ಪೈಕಿ ಎಂಟು ಬಸ್‌ಗಳು ಬಂದಿವೆ. ಉಳಿದ ಬಸ್‌ಗಳು ಅಲ್ಲೇ ಉಳಿದುಕೊಂಡಿವೆ ಎಂದು ಉಡುಪಿ ಡಿಪೋ ವ್ಯವಸ್ಥಾಪಕ ಉದಯ ಕುಮಾರ್ ತಿಳಿಸಿದ್ದಾರೆ.