ಕೋವಿಡ್ ನಿಯಂತ್ರಣ: ಸಚಿವ ಕೋಟಾ ನೇತೃತ್ವದಲ್ಲಿ ತುರ್ತು ಸಭೆ
ಮಂಗಳೂರು, ಎ.8: ದ.ಕ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕೊರೋನ ನಿಯಂತ್ರಣ ಪರಿಶೀಲನಾ ತುರ್ತು ಸಭೆಯು ಜಿಲ್ಲಾಧಿಕಾರಿಯ ಕಚೇರಿಯಲ್ಲಿ ನಡೆಯಿತು.
ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೇರಿದಂತೆ ಪೂರ್ಣಚಿಕಿತ್ಸೆ ಲಭ್ಯವಿರುವುದರಿಂದ ಜಿಲ್ಲಾಸ್ಪತ್ರೆಯ ಬದಲು ತಾಲೂಕು ಆಸ್ಪತ್ರೆ ಗಳಲ್ಲೇ ಚಿಕಿತ್ಸೆ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಕೊರೋನ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಮಾತನಾಡಿ ಜಿಲ್ಲೆಯಲ್ಲಿ 60ವರ್ಷ ಮೇಲ್ಪಟ್ಟ ಹಿರಿಯರ ಸಂಖ್ಯೆ 2,01,629 ಇದ್ದು, ಇವರ ಪೈಕಿ 67,674 ಹಿರಿಯರಿಗೆ ಅಂದರೆ ಶೇ.33ರಷ್ಟು ಹಿರಿಯ ನಾಗರಿಕರಿಗೆ ಕೊರೋನ ಪ್ರತಿರೋಧಕ ಲಸಿಕೆಗಳನ್ನು ನೀಡಲಾಗಿದೆ. 45 ವರ್ಷ ಮೇಲ್ಪಟ್ಟವರ ಸಂಖ್ಯೆ 4,16,123 ಇದ್ದು, ಇದೀಗ 24,603 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ವಿವರಿಸಿದರು.