ಐಡಿಯಲ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ, ಶಿಕ್ಷರಿಗಾಗಿ ‘ಓರಿಯಂಟೇಶನ್’ ಕಾರ್ಯಕ್ರಮ

Update: 2021-04-08 17:15 GMT

ಕುಮಟಾ: ಇಲ್ಲಿನ ಹೊನ್ನಾಳಿ ರಸ್ತೆಯಲ್ಲಿರುವ ಐಡಿಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯಶನ್ ಐಟಾ ಉತ್ತರ ಕನ್ನಡ ಜಿಲ್ಲೆ ಇದರ ಸಹಭಾಗಿತ್ವದಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷರಿಗಾಗಿ ಒಂದು ದಿನದ ‘ಓರಿಯಂಟೇಶನ್’ ಕಾರ್ಯಕ್ರಮ ನಡೆಯಿತು.

ಭಟ್ಕಳದ (ಮೋಟಿವೇಷನಲ್ ಸ್ಪೀಕರ್ಸ್) ಪ್ರೇರಕ ಭಾಷಣಗಾರರಾದ ಗಾನಿಮ್ ಮೊಹತೆಶಮ್ ಹಾಗೂ ಅಹೀದ್ ಮೊಹತೆಶಮ್, ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಕರ್ನಾಟಕ ಇದರ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ, ಪ್ರೌಢಶಾಲಾ ಹಂತ ವಿದ್ಯಾರ್ಥಿಗಳ ಬದುಕಿನಲ್ಲಿ ಅತ್ಯಂತ ಮಹತ್ವದ್ದಾಗಿದ್ದು ಎಲ್ಲ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಬಯಸುತ್ತಾರೆ. ಶಿಕ್ಷಕರ ಸಲಹೆ ಸೂಚನೆಗಳು ಸರಿಯಾಗಿ ಪಾಲಿಸಿದ್ದಲ್ಲಿ ಖಂಡಿತವಾಗಿಯೂ ಉತ್ತಮ ಅಂಕಗಳನ್ನು ಪಡೆದುಕೊಳ್ಳಬಹುದು ಎಂದರು.

ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಮೌಲ್ಯಗಳನ್ನು ಬೆಳೆಸಿ ಅವರನ್ನು ಸಮಾಜದ ಹಿತಚಿಂತಕರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಕಾರ್ಯಗಾರ, ಮಾರ್ಗದರ್ಶಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಎಂದರು. 

ಸಮಾರೋಪ ಸಮಾರಂಭದಲ್ಲಿ ಸಂಸ್ಥೇಯ ಅಧ್ಯಕ್ಷ ಬಸ್ತಿ ಅಬ್ದುಲ್ ಮಲೀಕ್ ಮಾತನಾಡಿ, ಶಿಕ್ಷಕರು ವಿವಿಧ ಮೂಲಗಳಿಂದ ಜ್ಞಾನವನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಾರೆ ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮುಝಫರ್ ಶೇಕ್, ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯ ಕಾರ್ಯದರ್ಶಿ ಯಾಸಿನ್ ಭಿಕ್ಬಾ, ಉ.ಕ. ಜಿಲ್ಲಾಧ್ಯಕ್ಷ ಅಲಿ ಮನಿಗಾರ ಹಾಗು ಐಡಿಯಲ್ ಎಜ್ಯುಕೇಶನ್ ಟ್ರಸ್ಟ್‍ನ ಟ್ರಸ್ಟಿಗಳಾದ ಅಬ್ದುಲ್ ಕರೀಮ್ ಶೇಖ್, ಇಬ್ರಹೀಮ್ ಸಾಹೇಬ್, ಮುಹಮ್ಮದ್ ಶಫಿ ಶೇಕ್ ಉಪಸ್ಥಿತರಿದ್ದರು.

ಐಡಿಯಲ್ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶಾಹಿಸ್ತಾ ಪರ್ವಿನ್ ಸ್ವಾಗತಿಸಿದರು. ಮಾಧುರಿ ನಾಯ್ಕ ಧನ್ಯವಾದ ಅರ್ಪಿಸಿದರು. ಶರೀಫಾ ಶೇಖ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News