ಫೆಲೆಸ್ತೀನ್ ನಿರಾಶ್ರಿತರಿಗಾಗಿ 150 ಮಿಲಿಯನ್ ಡಾಲರ್ ದೇಣಿಗೆ ಘೋಷಿಸಿದ ಅಮೆರಿಕ

Update: 2021-04-08 17:29 GMT

ವಾಶಿಂಗ್ಟನ್, ಎ. 8: ಫೆಲೆಸ್ತೀನ್ ನಿರಾಶ್ರಿತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ವಿಶ್ವಸಂಸ್ಥೆಯ ಪರಿಹಾರ ಮತ್ತು ಕೆಲಸ ಸಂಸ್ಥೆ (ಯುಎನ್‌ಆರ್‌ಡಬ್ಲುಎ)ಗೆ 150 ಮಿಲಿಯ ಡಾಲರ್ (ಸುಮಾರು 1,120 ಕೋಟಿ ರೂಪಾಯಿ) ದೇಣಿಗೆ ನೀಡುವುದಾಗಿ ಅಮೆರಿಕ ಬುಧವಾರ ಪ್ರಕಟಿಸಿದೆ.

ಈ ಸಂಸ್ಥೆಯು ಮಧ್ಯಪ್ರಾಚ್ಯದಾದ್ಯಂತ ಇರುವ ಫೆಲೆಸ್ತೀನ್ ನಿರಾಶ್ರಿತರಿಗೆ ಜೀವನಾಧಾರ ಮತ್ತು ಮಾನವೀಯ ನೆರವು ನೀಡುತ್ತಿದೆ. ಈ ಸಂಸ್ಥೆಯು 1949ರಲ್ಲಿ ಸ್ಥಾಪನೆಯಾದಂದಿನಿಂದ 2018ರವರೆಗೂ ಅಮೆರಿಕವು ಅದರ ದೊಡ್ಡ ದೇಣಿಗೆದಾರನಾಗಿತ್ತು.
ಆದರೆ, 2018ರಲ್ಲಿ ಫೆಲೆಸ್ತೀನ್ ಪ್ರಾಧಿಕಾರದೊಂದಿಗಿನ ತನ್ನ ಎಲ್ಲ ಸಂಬಂಧಗಳನ್ನು ಕಡಿದುಕೊಂಡ ಅಮೆರಿಕದ ಅಂದಿನ ಡೊನಾಲ್ಡ್ ಟ್ರಂಪ್ ಆಡಳಿತ, ಯುಎನ್‌ಆರ್‌ಡಬ್ಲುಎಗೆ ನೀಡಲಾಗುತ್ತಿದ್ದ ಬಹುತೇಕ ಎಲ್ಲ ನೆರವನ್ನು ಸ್ಥಗಿತಗೊಳಿಸಿತ್ತು.

ನಿರ್ದಿಷ್ಟ ಮಾನದಂಡಗಳ ಅಡಿಯಲ್ಲಿ ಇಸ್ರೇಲ್‌ನೊಂದಿಗೆ ಮಾತುಕತೆ ನಡೆಸುವಂತೆ ಫೆಲೆಸ್ತೀನೀಯರ ಮೇಲೆ ಒತ್ತಡ ಹಾಕುವುದಕ್ಕಾಗಿ ಟ್ರಂಪ್ ಆಡಳಿತ ಹೀಗೆ ಮಾಡಿತ್ತು ಎಂಬುದಾಗಿ ವಿಶ್ಲೇಷಿಸಲಾಗಿದೆ. ಆದರೆ, ಈ ಮಾನದಂಡಗಳ ಅಡಿಯಲ್ಲಿ ಮಾತುಕತೆ ನಡೆಸುವುದೆಂದರೆ ಫೆಲೆಸ್ತೀನೀಯರಿಗೆ ಸ್ವತಂತ್ರ ದೇಶವನ್ನು ನಿರಾಕರಿಸಿದಂತೆ ಎಂಬ ಭೀತಿಯನ್ನು ಫೆಲೆಸ್ತೀನ್ ನಾಯಕತ್ವ ಹೊಂದಿತ್ತು.

ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಯುಎನ್‌ಆರ್‌ಡಬ್ಲುಎದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈಗ ಜೋ ಬೈಡನ್ ನೇತೃತ್ವದ ಅಮೆರಿಕದ ಹೊಸ ಆಡಳಿತದ ದೇಣಿಗೆಯು ಯುಎನ್‌ಆರ್‌ಡಬ್ಲುಎಯಲ್ಲಿ ಹೊಸ ಚೈತನ್ಯಕ್ಕೆ ಕಾರಣವಾಗಿದೆ.
‘‘ಯುಎನ್‌ಆರ್‌ಡಬ್ಲುಎ ಐದು ಲಕ್ಷಕ್ಕೂ ಅಧಿಕ ಫೆಲೆಸ್ತೀನ್ ಬಾಲಕರು ಮತ್ತು ಬಾಲಕಿಯರಿಗೆ ಶಿಕ್ಷಣ ನೀಡುತ್ತಿದೆ. ಅದರ ಸೇವೆಗಳಿಗಾಗಿ ನೀಡಲಾಗುತ್ತಿರುವ ಬೆಂಬಲವನ್ನು ಪುನರಾರಂಭಿಸಲು ಅಮೆರಿಕ ಸಂತೋಷಪಡುತ್ತದೆ’’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News