ಮಂಗಳೂರು: ಭಿಕ್ಷಾಟನೆಯಲ್ಲಿ ನಿರತರಾಗಿದ್ದ 9 ಮಕ್ಕಳ ರಕ್ಷಣೆ

Update: 2021-04-09 16:00 GMT

ಮಂಗಳೂರು, ಎ.9: ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯ ಪೊಳಲಿಯಲ್ಲಿ ಜಾತ್ರೆಯ ಸಂದರ್ಭ ಬೆಲೂನ್ ಮಾರುತ್ತಾ ಭಿಕ್ಷಾಟನೆಯಲ್ಲಿ ನಿರತರಾಗಿದ್ದ 9 ಅಪ್ರಾಪ್ತ ಮಕ್ಕಳನ್ನು ಮಕ್ಕಳ ತಾಯಂದಿರ ಜೊತೆಗೆ ಶುಕ್ರವಾರ ರಕ್ಷಣೆ ಮಾಡಲಾಗಿದೆ.

ಚೈಲ್ಡ್‌ಲೈನ್-1098 ದ.ಕ.ಜಿಲ್ಲೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಬಂಟ್ವಾಳ ಶಿಶು ಅಭಿವೃದ್ದಿ ಯೋಜನಾಧಿಕಾರಿಯ ಸಹಯೋಗದಿಂದ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಸ್ವಾಧಾರ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಈ ಮಕ್ಕಳು ರಾಜಸ್ಥಾನ ಮೂಲದವರು ಎಂದು ತಿಳಿದು ಬಂದಿದೆ.

3ರಿಂದ 8 ವರ್ಷದೊಳಗಿನ ಈ ಮಕ್ಕಳು ಪೊಳಲಿ ದ್ವಾರದ ಬಳಿ ಬೆಲೂನ್ ಮಾರಾಟ ಮಾಡುತ್ತಲೇ ಭಿಕ್ಷೆ ಬೇಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಚೈಲ್ಡ್‌ಲೈನ್‌ಗೆ ಮಾಹಿತಿ ನೀಡಿದ್ದರು. ಈ ಮಕ್ಕಳ ಪೈಕಿ ಕೆಲವರನ್ನು ಹಿಂದೆಯೂ ಚೈಲ್ಡ್‌ಲೈನ್‌ನವರು ವಶಕ್ಕೆ ಪಡೆದು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ್ದರು. ಅಲ್ಲಿಂದ ಹೊರ ಬಂದ ಬಳಿಕವೂ ಈ ಮಕ್ಕಳು ಮತ್ತೆ ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಕಾರ್ಯಾಚರಣೆಯಲ್ಲಿ ಚೈಲ್ಡ್‌ಲೈನ್ ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿ, ಸಿಬ್ಬಂದಿ ಅಸುಂತಾ, ರೇವತಿ, ಜಯಂತಿ, ಆಕಾಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಧ್ಯಾ, ರವಿಕಿರಣ್ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿ, ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News