15 ದಿನದೊಳಗೆ 1ಡೇ ಕನ್ವರ್ಷನ್ ಯೋಜನೆಯನ್ನು ಜಾರಿಗೊಳಿಸಲಾಗುವುದು: ಸಚಿವ ಆರ್. ಅಶೋಕ್

Update: 2021-04-09 13:03 GMT

​ಬೆಳ್ತಂಗಡಿ: ಕಂದಾಯ ಇಲಾಖೆಯನ್ನು ಜನಪರವಾಗಿ ರೂಪಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಭೂ ಪರಿವರ್ತನೆ (ಕನ್ವರ್ಷನ್) ಗಾಗಿ ಜನರು ವರ್ಷಗಟ್ಟಲೆ ಅಲೆದಾಡುತ್ತಿದ್ದು, ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ 15 ದಿನದ ಒಳಗೆ 1ಡೇ ಕನ್ವರ್ಷನ್ ಯೋಜನೆಯನ್ನು ಜಾರಿಗೊಳಿಸುವುದಾಗಿ ರಾಜ್ಯ ಸರಕಾರದ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಅವರು ಬೆಳ್ತಂಗಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಶುಕ್ರವಾರ ತಾಲೂಕಿನ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು, ಭೂ ಪರಿವರ್ತನೆ ಯನ್ನು ಒಂದೇ ದಿನದಲ್ಲಿ ಮಾಡಿಕೊಡುವ ಗುರಿಯೊಂದಿಗೆ ಈ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು. 

ಬೆಳ್ತಂಗಡಿ ತಾಲೂಕಿನ ವೇಣೂರು, ಬೆಳ್ತಂಗಡಿ, ಕೊಕ್ಕಡ ಹೋಬಳಿ ಕಛೇರಿ ಕಟ್ಟಡಕ್ಕೆ ತಲಾ ರೂ.15 ಲಕ್ಷದಂತೆ ಒಟ್ಟು 45.ಲಕ್ಷ ರೂ ಮಂಜೂರುಗೊಳಿಸುವುದಾಗಿ ತಿಳಿಸಿದ ಅವರು, ಗ್ರಾಮದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಕಂದಾಯ ಇಲಾಖೆಯ ವತಿಯಿಂದ ನಡೆಯುತ್ತಿರುವ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ' ಕಾರ್ಯಕ್ರಮ ಮುಂದುವರಿಯಲಿದೆ ಎಂದರು. ಯಾರೂ ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಅಲೆದಾಡುವ ಸ್ಥಿತಿ ಇರಬಾರದು ಎಂದರು. ಶಾಸಕ ಹರೀಶ್ ಪೂಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ತಾಲೂಕಿನ ಅರ್ಹ ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ ವಿತರಿಸಲಾಯಿತು.

ದ.ಕ. ಜಿಲ್ಲಾ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ, ಸಹಾಯಕ ಆಯುಕ್ತ ಡಾ. ಯತೀಶ್ ಉಲ್ಲಾಳ್, ತಹಶೀಲ್ದಾರ್ ಮಹೇಶ್ ಜೆ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಜಿ.ಪಂ ಸದಸ್ಯರುಗಳಾದ ಕೊರಗಪ್ಪ ನಾಯ್ಕ, ಮಮತಾ ಎಂ ಶೆಟ್ಟಿ, ಸೌಮ್ಯಲತಾ ಜಯಂತ್, ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಜನಿ ಕುಡ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್ ರವರನ್ನು  ಶಾಲು ಹೊದಿಸಿ, ಸ್ಮರಣಿಕೆ ನೀಡಿ, ಸನ್ಮಾನಿಸಿ ಗೌರವಿಸಲಾಯಿತು.
ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ನ.ಪಂ. ಉಪಾಧ್ಯಕ್ಷ ಜಯಾನಂದ ಗೌಡ, ತಾ.ಪಂ ಉಪಾಧ್ಯಕ್ಷೆ ವೇದಾವತಿ, ತಾ.ಪಂ ಸದಸ್ಯರಾದ ಕೃಷ್ಣಯ್ಯ ಆಚಾರ್, ಸುಧೀರ್, ಸುಶೀಲಾ, ಹಾಗೂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News