ಎ.10ರಿಂದ ಉಡುಪಿ-ಮಣಿಪಾಲಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ

Update: 2021-04-09 13:51 GMT
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ, ಎ.9: ರಾಜ್ಯ ಸರಕಾರ ಇಂದು ಹೊರಡಿಸಿದ ಹೊಸ ಆದೇಶದಂತೆ ಉಡುಪಿ-ಮಣಿಪಾಲ (ಉಡುಪಿ ನಗರಸಭಾ ವ್ಯಾಪ್ತಿ) ಸೇರಿದಂತೆ ರಾಜ್ಯದ ಏಳು ನಗರಗಳಲ್ಲಿ ಎ.10ರಿಂದ 20ರವರೆಗೆ ರಾತ್ರಿ 10ಗಂಟೆಯಿಂದ ಮುಂಜಾನೆ 5:00 ಗಂಟೆಯವರೆಗೆ ಕೊರೋನ ರಾತ್ರಿ ಕರ್ಫ್ಯೂವನ್ನು ಜಾರಿಗೊಳಿಸಲಾಗುತ್ತಿದ್ದು, ಈ ವೇಳೆ ವೈದ್ಯಕೀಯ ಸೇವೆಯನ್ನು ಹೊರತು ಪಡಿಸಿ ಉಳಿದೆಲ್ಲಾ ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಈ ಕುರಿತು ಇಂದು ವೀಡಿಯೋ ಸಂದೇಶವೊಂದನ್ನು ನೀಡಿರುವ ಅವರು, ಇದರಲ್ಲಿ ಕೆಲವೊಂದು ಚಟುವಟಿಕೆಗಳಿಗೆ ವಿನಾಯಿತಿಯನ್ನು ನೀಡಲಾಗಿದೆ. ಇವುಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಚಟುವಟಿಕೆಗಳಿಗೆ ಪ್ರತಿದಿನ ರಾತ್ರಿ 10ರಿಂದ ಮುಂಜಾನೆ 5ರವರೆಗೆ ನಿರ್ಬಂಧ ವಿಧಿಸಲಾಗುತ್ತದೆ ಎಂದರು.

ಕೊರೋನ ಕರ್ಫ್ಯೂ ಸಂದರ್ಭದಲ್ಲಿ ಈ ಕೆಳಗಿನ ಅತ್ಯವಶ್ಯಕ ಸೇವೆಗಳಿಗೆ ವಿನಾಯಿತಿ ಇರುತ್ತದೆ.

►ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಹಾಗೂ ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗೆ ಆಸ್ಪತ್ರೆಗೆ ತೆರಳಲು ಅವಕಾಶವಿದೆ.
►ಯಾವುದಾದರೂ ಕಂಪೆನಿ ಅಥವಾ ಪ್ಯಾಕ್ಟರಿಗಳಲ್ಲಿ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವವರಾದರೆ ಅವರು ರಾತ್ರಿ 10 ಗಂಟೆಯೊಳಗೆ ಕೆಲಸಕ್ಕೆ ತೆರಳಿ ಮುಂಜಾನೆ 5:00ರ ಬಳಿಕ ಮನೆಗೆ ಹಿಂದಿರುಗಬಹುದು.
►ವೈದ್ಯಕೀಯ ಸೇವೆ ಮತ್ತು ತುರ್ತು ಚಟುವಟಿಕೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಆರ್ಥಿಕ ಚಟುವಟಿಕೆಗಳನ್ನು ಉಡುಪಿ ಮತ್ತು ಮಣಿಪಾಲ ವ್ಯಾಪ್ತಿಯಲ್ಲಿ ನಿರ್ಬಂಧಿಸಲಾಗಿದೆ. ಯಾರಾದರೂ ಇ-ಕಾಮರ್ಸ್ ಅಥವಾ ಹೋಮ್ ಡೆಲಿವರಿ ಇದ್ದರೆ ಅವರು ಹೋಗಿ ಡೆಲಿವರಿ ಕೊಟ್ಟು ಬರಲು ಅನುಮತಿ ನೀಡಲಾಗುವುದು.
►ಬಸ್ಸು, ರೈಲು, ವಿಮಾನದಲ್ಲಿ ದೂರ ಪ್ರಯಾಣಿಸುವವರಿದ್ದರೆ ಅವರಿಗೆ ಅಟೋ ಅಥವಾ ಕ್ಯಾಬ್‌ಗಳಲ್ಲಿ ನಿಲ್ದಾಣಗಳಿಗೆ ಹೋಗಲು ಅಥವಾ ಅಲ್ಲಿಂದ ಬರಲು ಅವಕಾಶವಿದೆ. ಆದರೆ ಅಂಥವರು ತಮ್ಮ ಪ್ರಯಾಣದ ಅಧಿಕೃತ ಟಿಕೇಟ್‌ನ್ನು ಹೊಂದಿರಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News