×
Ad

ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಅನುಷ್ಟಾನ ಪ್ರತಿಯೋಬ್ಬ ನಾಗರಿಕರ ಜವಾಬ್ದಾರಿ: ಡಾ. ಆರ್. ಜಿ ಆನಂದ್

Update: 2021-04-09 18:55 IST

ಉಡುಪಿ, ಎ.9: ಮಕ್ಕಳ ಹಕ್ಕುಗಳ ರಕ್ಷಣೆಯೂ ಸೇರಿದಂತೆ, ಅವುಗಳ ಅನುಷ್ಟಾನ ಮಾಡುವುದು ಸಮಾಜದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ಆರ್. ಜಿ ಆನಂದ್ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಛೇರಿ ಸಬಾಂಗಣದಲ್ಲಿ ಗುರುವಾರ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಬಾಗೀದಾರರ ಸಮಾಲೋಚನಾ ಸಭೆ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಮಕ್ಕಳ ರಕ್ಷಣೆ ಸೇರಿದಂತೆ ಅವರ ಕಲ್ಯಾಣಾಭಿವೃದ್ಧಿಗೆ ಸರಕಾರ ಅನೇಕ ಯೋಜನೆಗಳು, ಕಾರ್ಯಕ್ರಮಗಳು, ಕಾನೂನುಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಪ್ರತಿಶತ ನೂರರಷ್ಟು ಜಾರಿಗೆ ತರುವುದರೊಂದಿಗೆ ಮಕ್ಕಳ ಶ್ರೇಯಾಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದರು.

ಮಕ್ಕಳ ಹಕ್ಕುಗಳ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ಉಡುಪಿ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಿದೆ ಎಂದ ಅವರು, ಮಕ್ಕಳ ಸಹಾಯವಾಣಿಗೆ ಕರೆಗಳು ಬಂದಾಗ ಅವುಗಳನ್ನು ನೊಂದಣಿ ಮಾಡಿಕೊಳ್ಳುವುದರೊಂದಿಗೆ ಸಂಬಂಧಪಟ್ಟ ಪ್ರಾಧಿಕಾರದ ಗಮನಕ್ಕೆ ತಂದು ಅವುಗಳನ್ನು ಕೂಡಲೇ ಪರಿಹರಿಸಬೇಕೆಂದು ತಿಳಿಸಿದರು.

ಜಿಲ್ಲೆಯಲ್ಲಿ ಉದ್ಯೋಗ ಅರಸಿ ಬರುವ ವಲಸೆ ಕಾರ್ಮಿಕರ ಮಕ್ಕಳು ಮಲ್ಪೆ ಬಂದರಿನಲ್ಲಿ ಮೀನು ಆಯುವ ಕೆಲಸ ಮಾಡುತ್ತಿರುವ ಬಗ್ಗೆ ಕೇಳಿ ಬರುತ್ತಿದೆ. ಮಕ್ಕಳ ರಕ್ಷಣಾ ಘಟಕದ ಸದಸ್ಯರು ಸೇರಿದಂತೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ಅಲ್ಲಿಗೆ ಆಗಿಂದಾಗ್ಗೆ ಭೇಟಿ ನೀಡಿ ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ನಿಯಂತ್ರಿಸಬೇಕು ಎಂದರು.

ಸಮಾಜದ ಅನಿಷ್ಟಗಳಲ್ಲಿ ಒಂದಾದ ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗೋಳಿಸಬೇಕು. ಜಿಲ್ಲೆಯಲ್ಲಿ ಇಂಥ 3 ಪ್ರಕರಣಗಳು ಆಗಿರುವುದು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ಮಕ್ಕಳು ಬಾಲ ಕಾರ್ಮಿಕರಾಗದಂತೆ ಎಚ್ಚರ ವಹಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ದುಶ್ಚಟಗಳಿಗೆ ಬಲಿಯಾಗುವುದರೊಂದಿಗೆ ವ್ಯಸನಿ ಗಳಾಗುತ್ತಿದ್ದಾರೆ. ಇವುಗಳಿಗೆ ಕಡಿವಾಣ ಹಾಕುವುದರೊಂದಿಗೆ ಅವರುಗಳಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಲು ಶಿಕ್ಷಕರು ಹಾಗೂ ಪೋಷಕರು ಮುಂದಾಗಬೇಕು ಎಂದರು.

ಜಿಲ್ಲೆಯಲ್ಲಿ 28 ಮಕ್ಕಳ ಪಾಲನಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳಲ್ಲಿ 434ಕ್ಕೂ ಹೆಚ್ಚು ಮಕ್ಕಳು ಆಶ್ರಯ ಪಡೆಯುತ್ತಿದ್ದಾರೆ. ಅವರಿಗೆ ಉತ್ತಮ ಆಹಾರ, ಮನೋರಂಜನೆ ಸೇರಿದಂತೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಎಎಸ್ಪಿ ಕುಮಾರ್ ಚಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುಧೀರ್‌ಚಂದ್ರ ಸೂಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್ ಶೇಷಪ್ಪ ಹಾಗೂ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News