"ದಿಶಾ ರವಿ ಕ್ರಿಯಾಶೀಲತೆಯನ್ನು ನಾನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ"

Update: 2021-04-09 14:02 GMT
photo: twitter

ಹೊಸದಿಲ್ಲಿ: ರೈತ ಪ್ರತಿಭಟನೆ ಕುರಿತಾದಂತೆ ಜಾಗತಿಕ ಮಟ್ಟದ ಗಮನ ಸೆಳೆಯಲು ಟೂಲ್‌ ಕಿಟ್‌ ರಚಿಸಿದ್ದಾರೆ ಎಂಬ ಆರೋಪದಲ್ಲಿ ಬಂಧಿತರಾಗಿದ್ದ ಹವಾಮಾನ ಮತ್ತು ಪರಿಸರ ಕಾರ್ಯಕರ್ತೆ ದಿಶಾರವಿಯ ಕುರಿತು ಅಮೆರಿಕಾದ ಹವಾಮಾನ ರಾಯಭಾರಿ ಜಾನ್‌ ಕೆರ್ರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. "ಭಾರತೀಯ ಹವಾಮಾನ ಕಾರ್ಯಕರ್ತೆ ದಿಶಾ ರವಿ ಪ್ರದರ್ಶಿಸಿದ ಕ್ರಿಯಾಶೀಲತೆಯನ್ನು ನಾನು ವೈಯಕ್ತಿಕವಾಗಿ ಸ್ವಾಗತಿಸಿದ್ದೇನೆ" ಎಂದು ಅವರು ಹೇಳಿದ್ದಾಗಿ indianexpress.com ವರದಿ ಮಾಡಿದೆ.

"ಮಾನವ ಹಕ್ಕುಗಳು ಯುನೈಟೆಡ್‌ ಸ್ಟೇಟ್ಸ್‌ ಗೆ ನಿರ್ಣಾಯಕ ವಿಷಯವಾಗಿದೆ" ಎಂದು ನಾಲ್ಕು ದಿನಗಳ ಭಾರತ ಭೇಟಿಯಲ್ಲಿರುವ ಕೆರ್ರಿ ಹೇಳಿದರು. "ಹವಾಮಾನ ವಿಚಾರಕ್ಕೆ ಸಂಬಂಧಿಸಿದಂತೆ ಜನರು ಏನು ಮಾಡಬೇಕಿತ್ತೋ, ಅದನ್ನು ಈಗಿನ ಯುವಜನತೆ ಮಾಡಿ ತೋರಿಸುತ್ತಿದೆ. ಈ ಕ್ರಿಯಾಶೀಲತೆಯನ್ನು ನಾನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ" ಎಂದು ಅವರು ಹೇಳಿದರು.

ಯುವ ಹವಾಮಾನ ಕಾರ್ಯಕರ್ತರ ಪಾತ್ರ ಮತ್ತು ಸರ್ಕಾರಗಳು ಅವರ ಹಕ್ಕುಗಳನ್ನು ಹೇಗೆ ಕಾಪಾಡಿಕೊಳ್ಳಬಹುದು ಅಥವಾ ಪ್ರೋತ್ಸಾಹಿಸಬಹುದು ಎಂಬ ಪ್ರಶ್ನೆಗೆ ಅವರು ರವಿ ಪ್ರಕರಣದ ಕುರಿತಾದಂತೆ ಅವರು ಪ್ರತಿಕ್ರಿಯಿಸುತ್ತಿದ್ದರು.

"ಯುನೈಟೆಡ್‌ ಸ್ಟೇಟ್ಸ್‌ ನಲ್ಲಿ ದಿಶಾ ರವಿಯಂತಹ ಹವಾರು ಯುವ ಹವಾಮಾನ ಕಾರ್ಯಕರ್ತರು ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ. ಇದು ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲೂ ಪ್ರಮುಖ ಪಾತ್ರ ವಹಿಸಿದೆ. ನನ್ನ ನೆನಪಿನ ಪ್ರಕಾರ, 1970ರಿಂದ ಹವಾಮಾನ ಬದಲಾವಣೆಯ ತೊಂದರೆಯು ಚುನಾವಣೆಯ ವಿಷಯವಾಗಿದೆ ಮತ್ತು ಯುವಕರು ಅದರ ನೇತೃತ್ವ ವಹಿಸಿದ್ದಾರೆ" ಎಂದು ಅವರು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News