ಮೂವರು ವೃದ್ಧೆಯರಿಗೆ ಕೋವಿಡ್ ಲಸಿಕೆಯ ಬದಲಿಗೆ ರೇಬಿಸ್ ಲಸಿಕೆ ನೀಡಿಕೆ!
ಲಕ್ನೋ: ಕೋವಿಡ್ ಲಸಿಕೆಗಾಗಿ ಸರಕಾರಿ ಆಸ್ಪತ್ರೆಗೆ ಹೋಗಿದ್ದ ಮೂವರು ವೃದ್ಧ ಮಹಿಳೆಯರಿಗೆ ರೇಬೀಸ್ ನಿರೋಧಕ ಚುಚ್ಚುಮದ್ದನ್ನು ನೀಡಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಿಂದ ವರದಿಯಾಗಿದೆ. ತನಿಖೆಯ ನಂತರ ರಾಜ್ಯ ಸರಕಾರವು ತನ್ನ ಈ ಪ್ರಮಾದವನ್ನು ಒಪ್ಪಿಕೊಂಡಿದೆ.
ಶಾಮ್ಲಿಯ ಸಮುದಾಯ ಆರೋಗ್ಯ ಕೇಂದ್ರದಿಂದ ಹಿಂದಿರುಗಿದ ನಂತರ ಸರೋಜ್ (70), ಅನಾರ್ಕಲಿ (72) ಹಾಗೂ ಸತ್ಯವತಿ (60) ಅಸ್ವಸ್ಥರಾದರು.
"ಈ ಘಟನೆಗೆ ಸಂಬಂಧಿಸಿ ನಾವು ವಿವರವಾದ ವರದಿಯನ್ನು ಸ್ವೀಕರಿಸಿದ್ದೇವೆ ಹಾಗೂ ಹಿರಿಯ ಮಹಿಳೆಯರು ತಮ್ಮ ಕೋವಿಡ್ ವ್ಯಾಕ್ಸಿನೇಷನ್ ಪಡೆಯಲು ಹೋಗಿದ್ದಾರೆಂದು ನಾವು ಖಚಿಪಡಿಸಿಕೊಂಡಿದ್ದೇವೆ ಆದರೆ ವೃದ್ದೆಯರು ಮೊದಲ ಮಹಡಿಯಲ್ಲಿರುವ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಹೋಗುವ ಬದಲಿಗೆ ಹೊರರೋಗಿ ವಿಭಾಗಕ್ಕೆ(ಒಪಿಡಿ) ಹೋಗಿದ್ದರು, ಅಲ್ಲಿ ಔಷಧವಿತರಕ ಯಾವುದೋ ಕೆಲಸದಲ್ಲಿ ನಿರತನಾಗಿದ್ದ. ಜನ ಔಷಧಿ ಕೇಂದ್ರದ ಔಷಧವಿತರಕನ ಬಳಿ ವೃದ್ದೆಯರಿಗೆ ರೇಬೀಸ್ ವಿರೋಧಿ ಇಂಜೆಕ್ಷನ್ ನೀಡುವಂತೆ ಕೇಳಿಕೊಂಡಿದ್ದ" ಎಂದು ಶಾಮ್ಲಿಯ ಜಿಲ್ಲಾಧಿಕಾರಿ ಜಸ್ಜಿತ್ ಕೌರ್ ಸುದ್ದಿಗಾರರಿಗೆ ನೀಡಿದ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
" ಔಷಧವಿತರಕನನ್ನು ಅಮಾನತುಗೊಳಿಸುವಂತೆ ನಾನು ಸಿಎಂಒಗೆ (ಮುಖ್ಯ ವೈದ್ಯಕೀಯ ಅಧಿಕಾರಿ) ಸೂಚನೆ ನೀಡಿದ್ದೇನೆ" ಎಂದು ಕೌರ್ ಹೇಳಿದರು.
ನನಗೆ 'ಕುತ್ತೆ ಕಾ ಟೀಕಾ' (ನಾಯಿ ಕಡಿತಕ್ಕೆ ನೀಡುವ ಆ್ಯಂಟಿ- ರೇಬೀಸ್ ಲಸಿಕೆ) ನೀಡಲಾಗಿದೆ . ಮನೆಗೆ ಮರಳಿದ ನಂತರ ನನಗೆ ತಲೆತಿರುಗುವಿಕೆ ಉಂಟಾಯಿತು. ಲಸಿಕೆ ಫಲಾನುಭವಿಗಳ ನೋಂದಣಿಗೆ ಅಗತ್ಯ ವಿರುವ ನನ್ನ ಆಧಾರ್ ಕಾರ್ಡ್ ಕೇಳದಿದ್ದಾಗ ಆಸ್ಪತ್ರೆಯವರ ಮೇಲೆ ನನಗೆ ಅನುಮಾನವಿತ್ತು" ಎಂದು ಅನಾರ್ಕಲಿ ಹೇಳಿದರು.