ಕುಲಪತಿ ಹುದ್ದೆಗೆ ಲಂಚ ಪ್ರಕರಣ: ಮಂಗಳೂರು ವಿವಿಯ ಡಾ. ಜೈಶಂಕರ್ ಅಮಾನತು
ಮಂಗಳೂರು, ಎ.9: ರಾಯಚೂರು ವಿವಿಯಲ್ಲಿ ಕುಲಪತಿ ಹುದ್ದೆ ಪಡೆಯುವುದಕ್ಕಾಗಿ ರಾಮಸೇನೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಅತ್ತಾವರನಿಗೆ 17:50 ಲಕ್ಷ ರೂ. ಲಂಚ ನೀಡಿ ಬಳಿಕ ಪೊಲೀಸ್ ಠಾಣೆಯ ಮೆಟ್ಟಲೇರಿದ್ದ ಮಂಗಳೂರು ವಿವಿಯ ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಜೈಶಂಕರ್‌ರನ್ನು ಅಮಾನತು ಮಾಡಲಾಗಿದೆ.
ಮಂಗಳೂರು ವಿವಿಯ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಿಂಡಿಕೇಟ್ ವಿಶೇಷ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಅಲ್ಲದೆ ಸಿಂಡಿಕೇಟ್ ಸದಸ್ಯರ ಮನವಿಯಂತೆ ಪ್ರಕರಣದ ಬಗ್ಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ಮಾಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಎಂ.ಜೈಶಂಕರ್‌ಗೆ ನೋಟಿಸ್ ನೀಡಿದ್ದೆವು. ಈ ನಿಟ್ಟಿನಲ್ಲಿ ಇಂದು ನಡೆದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಆಂತರಿಕ ತನಿಖಾ ವರದಿ ಬರುವವರೆಗೆ ಅವರನ್ನು ಅಮಾನತು ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ಮಾಡಿಸಲಾಗುವುದು ಎಂದು ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರಾಧ್ಯಾಪಕ ಡಾ.ಎಂ.ಜೈಶಂಕರ್‌ಗೆ ಮಂಗಳೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಹುದ್ದೆಯ ಪ್ರಭಾರವನ್ನು ಈ ಹಿಂದೆ ವಹಿಸಲಾಗಿತ್ತು. ಆದರೆ ಜೈಶಂಕರ್ ಕುಲಪತಿ ಹುದ್ದೆ ಪಡೆಯಲು ಲಂಚ ನೀಡಿದ ಆರೋಪ ಕೇಳಿ ಬಂದ ಬಳಿಕ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗಿತ್ತು. ಅಲ್ಲದೆ ಜೈಶಂಕರ್ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಆ ಹಿನ್ನೆಲೆಯಲ್ಲಿ ಜೈಶಂಕರ್‌ಗೆ ವಹಿಸಲಾಗಿದ್ದ ಮಂಗಳೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ಪ್ರಭಾರ ಹುದ್ದೆಯನ್ನು ರದ್ದುಪಡಿಸಿ ಆದೇಶಿಸಲಾಗಿತ್ತು.