×
Ad

​ಕನ್ನಡ ಬಾರದ ಹಿಂದಿ ಭಾಷಿಗ ಬ್ಯಾಂಕ್ ಮ್ಯಾನೇಜರ್‌ಗಳಿಂದ ಸಮಸ್ಯೆ: ಉಡುಪಿ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

Update: 2021-04-09 20:20 IST

ಉಡುಪಿ, ಎ.9: ಗ್ರಾಮೀಣ ಪ್ರದೇಶಗಳಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿನ ಶಾಖೆಗಳಲ್ಲಿ ಹಿಂದಿ ಭಾಷಿಗರ ಬದಲು ಕನ್ನಡ ಭಾಷೆ ಬರುವ ಮ್ಯಾನೇಜರ್‌ಗಳನ್ನೇ ನಿಯೋಜಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಬೇಕೆಂದು ತಾಪಂ ಸದಸ್ಯ ಧನಂಜಯ್ ಕುಂದರ್ ಒತ್ತಾಯಿಸಿದ್ದಾರೆ.

ಉಡುಪಿ ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಧನಂಜಯ್ ಕುಂದರ್, ಬ್ಯಾಂಕ್ ಗಳನ್ನು ವಿಲೀನ ಮಾಡಿರುವ ಪರಿಣಾಮ ಕನ್ನಡ ಬಾರದ ಉತ್ತರ ಭಾರತದವರೇ ಇಂದು ಮ್ಯಾನೇಜರ್ ಆಗಿ ಬರುತ್ತಿದ್ದು, ಇದರಿಂದ ಸಂಧ್ಯಾ ಸುರಕ್ಷ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ವಿಚಾರಿಸಲು ಸ್ಥಳೀಯರಿಗೆ ಭಾಷಾ ಸಮಸ್ಯೆ ಅಡ್ಡಿಯಾಗುತ್ತಿದೆ ಎಂದು ದೂರಿದರು.

ಈ ಬಗ್ಗೆ ಪ್ರತ್ರಿಯಿಸಿದ ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್, ಇದಕ್ಕೆ ಬ್ಯಾಂಕಿನ ನಿಯಮಗಳು ಕೂಡ ಕಾರಣ ಇರಬಹುದು. ಆದರೂ ಈ ಕುರಿತು ಲೀಡ್ ಬ್ಯಾಂಕಿನ ಮೆನೇಜರ್‌ಗೆ ತಾಪಂನಿಂದ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಕಲ್ಲು ಸಾಗಾಟಕ್ಕೆ ಅಡ್ಡಿ ಆರೋಪ: ಕಟ್ಟಡ ಕಾಮಗಾರಿಗೆ ಸಂಬಂಧಿಸಿ ಮರಳು ಹಾಗೂ ಕಲ್ಲು ಸಾಗಾಟದ ವಾಹನಗಳಿಗೆ ಪೊಲೀಸರು ಅಡ್ಡಿ ಮಾಡುತ್ತಿದ್ದು, ಇದರಿಂದ ಬಡವರು ಮನೆ ನಿರ್ಮಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಗಣಿ ಮತ್ತು ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಮರಳು ಮತ್ತು ಕಲ್ಲು ಸಾಗಾಟಕ್ಕೆ ಅವಕಾಶ ಮಾಡಿಕೊಡುವಂತೆ ಮಾಡಬೇಕು ಎಂದು ಧನಂಜ್ ಕುಂದರ್ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಸದ್ಯಕ್ಕೆ ಕಲ್ಲು ಸಾಗಾಟಕ್ಕೆ ರಾಜ್ಯದಲ್ಲಿ ನಿಷೇಧ ಹೇರಲಾಗಿದೆ. ಪೊಲೀಸ್ ಇಲಾಖೆ ಮತ್ತು ಗಣಿ ಇಲಾಖೆಯ ಕಾರ್ಯಾಚರಣೆಯಲ್ಲಿ ನಮಗೆ ಹಸ್ತಕ್ಷೇಪ ಮಾಲು ಅವಕಾಶ ಇಲ್ಲ ಎಂದು ತಿಳಿಸಿದರು.

ಇಂದು ತಾಲೂಕು ಕಚೇರಿಯಲ್ಲಿ ಮರಣ ಪ್ರಮಾಣಪತ್ರ ಸರಿಯಾಗಿ ಸಿಗದೆ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆಂಬ ಸದಸ್ಯರೊಬ್ಬರ ದೂರಿಗೆ ಸ್ಪಂದಿಸಿದ ತಹಶೀಲ್ದಾರ್, ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಜರಗಿಸ ಲಾಗುವುದು ಎಂದು ಭರವಸೆ ನೀಡಿದರು.

22 ಕೆರೆಗಳ ಅಭಿವೃದ್ಧಿ: ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 79 ಕೆರೆಗಳಿದ್ದು, ಅವುಗಳಲ್ಲಿ 22 ಕೆರೆಗಳನ್ನು ನಗೇರಾ ಯೋಜನೆಯಡಿ ಹೂಳೆತ್ತುವ ಮೂಲಕ ಅಭಿವೃದ್ಧಿ ಮಾಡಲು ಯೋಜಿಸಲಾಗಿದೆ ಎಂದು ಸದಸ್ಯರೊಬ್ಬರ ಪ್ರಶ್ನೆಗೆ ಕಾರ್ಯನಿರ್ವ ಹಣಾಧಿಕಾರಿ ಮಾಹಿತಿ ನೀಡಿದರು.

ಕಲ್ಯಾಣಪುರ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದು ರಾಗಿದ್ದು, ಜಿಲ್ಲಾಡಳಿತದಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ಧನಂಜಯ ಕುಂದರ್ ಸಭೆಯಲ್ಲಿ ಆಗ್ರಹಿಸಿ ದರು. ಈ ಬಗ್ಗೆ ಪ್ರತ್ರಿಯಿಸಿದ ಕಾರ್ಯನಿರ್ವಹಣಾಧಿಕಾರಿ, ಪ್ರಸ್ತುತ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ತಹಶೀಲ್ದಾರ್ ಕ್ರಮ ವಹಿಸುತ್ತಿದ್ದು, ಪಂಚಾಯತ್ ವತಿಯಿಂದ ಅವರಿಗೆ ಮನವಿ ಸಲ್ಲಿಸಬಹುದು ಎಂದು ತಿಳಿಸಿದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಿಲ್ಪ ಆರ್.ಕೋಟ್ಯಾನ್, ಲೆಕ್ಕಾಧಿಕಾರಿ ಮೆಲ್ವಿನ್ ಥಾಮಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News