ತಣ್ಣೀರುಬಾವಿ: ಇನ್ನೂ ಪತ್ತೆಯಾಗದ ಮೀನುಗಾರ
ಮಂಗಳೂರು, ಎ.9: ಉಳ್ಳಾಲ ಗ್ರಾಮದ ಮೊಗವೀರಪಟ್ಣದಿಂದ ಗಿಲ್‌ನೆಟ್ (ನಾಡದೋಣಿ) ಮೀನುಗಾರಿಕೆಗೆ ತೆರಳಿದ್ದ ವೇಳೆ ಕಾಣೆಯಾಗಿದ್ದ ತಣ್ಣೀರುಬಾವಿಯ ದಾವೂದ್ ಸಿದ್ದೀಕ್ (35) ಶುಕ್ರವಾರವೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ದಾವೂದ್ ಸಿದ್ದೀಕ್, ಮುಹಮ್ಮದ್ ಫಯಾಝ್ ಹಸನ್, ಸಫ್ವಾನ್, ಜಾವೇದ್, ಜಾಫರ್, ಜಮಾಲ್ ಎಂಬವರು ಗುರುವಾರ ಪೂ.11:15ಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಈ ಸಂದರ್ಭ ದಾವೂದ್ ಸಿದ್ದೀಕ್ ಮೀನಿನ ಬಲೆಯನ್ನು ದೋಣಿಗೆ ಎಳೆಯುವಾಗ ಆಯತಪ್ಪಿ ಸಮುದ್ರಕ್ಕೆ ಬಿದ್ದು ಕಣ್ಮರೆಯಾಗಿದ್ದರು. ಉಳ್ಳಾಲ ಕಡಲ ತೀರದಿಂದ ಅರಬ್ಬೀ ಸಮುದ್ರದ ಸುಮಾರು 60 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿತ್ತು.
ಗುರುವಾರ ಮತ್ತು ಶುಕ್ರವಾರ ದಿನವಿಡೀ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ರಾತ್ರಿ ಹೊತ್ತು ಸಮುದ್ರದಲ್ಲಿ ಹುಡುಕಾಟ ನಡೆಸುವುದು ಕಷ್ಟಸಾಧ್ಯವಾದ ಕಾರಣ ಶನಿವಾರ ಮತ್ತೆ ಹುಡುಕಾಟ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ತಣ್ಣೀರುಬಾವಿಯ ಮುಳುಗು ರಕ್ಷಣಾ ತಂಡದ ಸದಸ್ಯರೂ ಆಗಿದ್ದ ದಾವೂದ್ ಸಿದ್ದೀಕ್ ಕಳೆದ 15 ವರ್ಷದಿಂದ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.