ಉಡುಪಿ-ಮಣಿಪಾಲ ರಾತ್ರಿ ಕರ್ಫ್ಯೂ ಆದೇಶ ಹಿಂಪಡೆಯಲು ಕೋರಿ ಸಿಎಂಗೆ ಶಾಸಕ ರಘುಪತಿ ಭಟ್ ಪತ್ರ
ಉಡುಪಿ, ಎ.9: ಉಳಿದ ನಗರಗಳಿಗೆ ಹೋಲಿಸಿದರೆ, ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸರಾಸರಿ ಪ್ರಕರಣಗಳು ಬಹಳಷ್ಟು ಕಡಿಮೆಯಾಗಿದೆ. ಉಡುಪಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗಳ ಸಹಯೋಗದೊಂದಿಗೆ ಕೋವಿಡ್-19 ಪ್ರಕರಣಗಳನ್ನು ತಹಬಂಧಿಗೆ ತರುವಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಅಲ್ಲದೇ ಜಿಲ್ಲೆಯ ಜನ ಸಾಮಾನ್ಯರೂ ಕೋವಿಡ್ ವೈರಸ್ ಹರಡುವಿಕೆ ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತಿದ್ದಾರೆ. ಆದ್ದರಿಂದ ಉಡುಪಿ ಮತ್ತು ಮಣಿಪಾಲ ನಗರಕ್ಕೆ ವಿಧಿಸಲಾಗಿರುವ ರಾತ್ರಿ ಕರ್ಫ್ಯೂ ಆದೇಶವನ್ನು ಹಿಂಪಡೆಯುವಂತೆ ಕೋರಿ ಉಡುಪಿ ಶಾಸಕ ಕೆ.ರಘುಪತಿ ಭಟ್, ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಭೂತಾರಾಧನೆ, ಯಕ್ಷಗಾನ, ದೇವಸ್ಥಾನಗಳ ಜಾತ್ರಾ ಮಹೋತ್ಸವಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಎಪ್ರಿಲ್-ಮೇ ತಿಂಗಳಲ್ಲಿ ಹೆಚ್ಚಾಗಿ ನಡೆಯುತ್ತವೆ. ಕಳೆದ ವರ್ಷ ಇದೇ ಸಮಯದಲ್ಲಿ ಕೋವಿಡ್-19ರ ಸಂಬಂಧ ದೇಶದಲ್ಲಿ ಲಾಕ್‌ಡೌನ್ ಹೇರಿದ್ದರಿಂದ ಈ ಭಾಗದ ಧಾರ್ಮಿಕ ಆಚರಣೆಗಳು ಸಂಪೂರ್ಣ ಸ್ಥಗಿತಗೊಂಡಿದ್ದವು ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ಭೂತಾರಾಧನೆ, ಯಕ್ಷಗಾನ, ದೇವಸ್ಥಾನಗಳ ಜಾತ್ರಾ ಮಹೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ರಾತ್ರಿ ಸಮಯದಲ್ಲೇ ನಡೆಯುವುದರಿಂದ ಮತ್ತೆ ರಾತ್ರಿ ಕರ್ಫ್ಯೂ ವಿಧಿಸಿರುವುದರಿಂದ ಈ ಬಾರಿಯೂ ತುಳುನಾಡಿನ ಧಾರ್ಮಿಕ ಆಚರಣೆಗಳು ಸ್ಥಗಿತಗೊಂಡು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದವರು ಪತ್ರದಲ್ಲಿ ವಿವರಿಸಿದ್ದಾರೆ.
ಇದರೊಂದಿಗೆ ಈಗಷ್ಟೇ ಚೇತರಿಸುತ್ತಿರುವ ವಾಣಿಜ್ಯ ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಂತಾಗುತ್ತದೆ. ಸಾರ್ವಜನಿಕರು ಆರ್ಥಿಕ ಸಂಕಷ್ಟಗಳಿಗೆ ಒಳಗಾಗುತ್ತಾರೆ. ಜಿಲ್ಲೆಯಲ್ಲಿ ದಿನವೊಂದಕ್ಕೆ 2,500 ಮಂದಿಗೆ ಕೋವಿಡ್ ಪರೀಕ್ಷೆಗಳು ನಡೆಯುತಿದ್ದು, ಇದರಲ್ಲಿ ಸರಾಸರಿ 50ರಿಂದ 60ರಷ್ಟು ಮಾತ್ರ ಪಾಸಿಟಿವ್ ಪ್ರಕರಣ ಕಂಡು ಬರುತ್ತಿವೆ.
ಜಿಲ್ಲೆಯಲ್ಲಿ ದಿನವೊಂದಕ್ಕೆ 6ರಿಂದ 7ಸಾವಿರ ಜನಕ್ಕೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆಗಳು, ಉತ್ತಮ ಮಟ್ಟದ ಚಿಕಿತ್ಸಾ ವ್ಯವಸ್ಥೆ ಇವೆ. ಜಿಲ್ಲೆಯ ಜನಸಾಮಾನ್ಯರೂ ವೈರಸ್ ಹರಡುವಿಕೆ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತಿದ್ದಾರೆ ಎಂದಿರುವ ಶಾಸಕ ರಘುಪತಿ ಭಟ್, ಹೀಗಾಗಿ ಉಡುಪಿ-ಮಣಿಪಾಲಗಳಲ್ಲಿ ವಿಧಿಸಲಾಗಿರುವ ರಾತ್ರಿ ಕರ್ಫ್ಯೂ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.