ಪದ್ಯಚ್ಯುತ ಮ್ಯಾನ್ಮಾರ್ ರಾಯಭಾರಿಗೆ ಆಶ್ರಯ ನೀಡಲು ಬ್ರಿಟನ್ ಮುಂದು

Update: 2021-04-09 18:20 GMT

ಲಂಡನ್, ಎ. 9: ಮ್ಯಾನ್ಮಾರ್‌ನ ಬ್ರಿಟನ್ ರಾಯಭಾರಿ ಕ್ಯಾವ್ ಝ್ವಾರ್ ಮಿನ್‌ಗೆ ಆಶ್ರಯ ನೀಡಲು ಇಚ್ಛಿಸಿರುವುದಾಗಿ ಬ್ರಿಟನ್ ಹೇಳಿದೆ. ಮ್ಯಾನ್ಮಾರ್‌ನ ಸೇನಾಡಳಿತದ ಪರವಾಗಿರುವ ರಾಜತಾಂತ್ರಿಕರು ರಾಯಭಾರ ಕಚೇರಿಯಿಂದ ಅವರನ್ನು ಹೊರದಬ್ಬಿದ ಬಳಿಕ ಬ್ರಿಟನ್ ಈ ನಿರ್ಧಾರ ತೆಗೆದುಕೊಂಡಿದೆ.

ಸೇನಾಡಳಿತವು ರಾಯಭಾರಿ ಹುದ್ದೆಯಿಂದ ಕ್ಯಾವ್ ಝ್ವಾರ್ ಮಿನ್‌ರನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ, ಮಿನ್‌ರನ್ನು ರಾಯಭಾರಿಯಾಗಿ ಪರಿಗಣಿಸಲು ತನಗೆ ಸಾಧ್ಯವಿಲ್ಲ ಎಂದು ಬ್ರಿಟನ್ ಹೇಳಿದ ಬಳಿಕ ಅವರು ಅತಂತ್ರರಾಗಿದ್ದರು.

   ಮ್ಯಾನ್ಮಾರ್‌ನ ಆಡಳಿತವನ್ನು ಸೇನೆ ಫೆಬ್ರವರಿ 1ರಂದು ವಶಪಡಿಸಿಕೊಂಡ ಬಳಿಕ, ಆ ದೇಶದ ಬ್ರಿಟನ್ ರಾಯಭಾರಿಯು ಪದಚ್ಯುತ ನಾಯಕಿ ಆಂಗ್ ಸಾನ್ ಸೂ ಕಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದು ಮ್ಯಾನ್ಮಾರ್ ಸೇನೆಯ ಕೆಂಗಣ್ಣಿಗೆ ಕಾರಣವಾಗಿದ್ದು, ಬ್ರಿಟನ್ ರಾಯಭಾರಿಯನ್ನು ವಜಾಗೊಳಿಸಿತ್ತು.

ಮಾನ್ಯತೆ ರದ್ದಾದ ಬಳಿಕ, ಕ್ಯಾವ್ ಝ್ವಾರ್ ಮಿನ್ ಗುರುವಾರ ಬ್ರಿಟನ್ ವಿದೇಶ ಸಚಿವಾಲಯದಲ್ಲಿ ಏಶ್ಯ ವ್ಯವಹಾರಗಳ ಕಾರ್ಯದರ್ಶಿಯಾಗಿರುವ ನೈಜಲ್ ಆ್ಯಡಮ್ಸ್‌ರನ್ನು ಭೇಟಿಯಾದರು.

‘‘ಅವರ ಧೈರ್ಯ ಮತ್ತು ದೇಶಪ್ರೇಮಕ್ಕೆ ನಾನು ಗೌರವ ಸಲ್ಲಿಸುತ್ತೇನೆ. ಬ್ರಿಟನ್‌ನಲ್ಲಿ ಅವರ ಸುರಕ್ಷತೆಗೆ ನಾವು ಬೆಂಬಲ ನೀಡುತ್ತೇನೆ’’ ಎಂಬುದಾಗಿ ಸಭೆಯ ಬಳಿಕ ಆ್ಯಡಮ್ಸ್ ಟ್ವೀಟ್ ಮಾಡಿದ್ದಾರೆ.

ಮ್ಯಾನ್ಮಾರ್ ರಾಯಭಾರಿಯನ್ನು ಅವರ ಕಚೇರಿಯಿಂದ ಹೊರಹಾಕಿರುವ ಕೃತ್ಯವನ್ನು ತಾನು ಖಂಡಿಸಿರುವುದಾಗಿ ಬ್ರಿಟನ್ ಹೇಳಿದೆ. ಕಚೇರಿಯಿಂದ ಹೊರಬಿದ್ದ ಬಳಿಕ, ಕ್ಯಾವ್ ಝ್ವಾರ್ ಮಿನ್ ರಾಯಭಾರ ಕಚೇರಿಯ ಹೊರಗೆ ತನ್ನ ಕಾರಿನಲ್ಲೇ ಮಲಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News