ರಾತ್ರಿಯ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತೆ ಸಿಎಂಗೆ ಶಾಸಕ ವೇದವ್ಯಾಸ್ ಕಾಮತ್ ಮನವಿ
Update: 2021-04-09 23:53 IST
ಮಂಗಳೂರು: ಮಂಗಳೂರಿನಲ್ಲಿ ರಾತ್ರಿ ವೇಳೆ ನಡೆಯುವಂತ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಸರಕಾರವು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ನಡೆಸಲು ಅವಕಾಶ ಕಲ್ಪಿಸಬೇಕೆಂದು ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದಾರೆ.
ಕೋವಿಡ್ 19 ಕಾರಣದಿಂದ ಕಳೆದ ವರ್ಷವೂ ಕೂಡ ಎಲ್ಲಾ ಕಡೆಗಳಲ್ಲೂ ಧಾರ್ಮಿಕ ಕಾರ್ಯಕ್ರಮಗಳು ನಡೆಸಲು ಸಾಧ್ಯವಾಗಿಲ್ಲ. ಮತ್ತೆ ಈ ವರ್ಷವೂ ಕೂಡ ಧಾರ್ಮಿಕ ಕಾರ್ಯಕ್ರಮಗಳು ನಿಂತು ಹೋದರೆ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸರಕಾರಕ್ಕೆ ಶಾಸಕನ ನೆಲೆಯಲ್ಲಿ, ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಸರಳವಾಗಿ ಈಗಾಗಲೇ ನಿಗದಿಪಡಿಸಿದ ಕೋಲ, ನೇಮ, ಯಕ್ಷಗಾನ, ನಾಗಾರಾಧನೆ ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ನಡೆಸಲು ಅವಕಾಶ ಕಲ್ಪಿಸಬೇಕೆಂದು ಶಾಸಕ ಕಾಮತ್ ಮನವಿ ಮಾಡಿಕೊಂಡಿದ್ದಾರೆ.