×
Ad

ಉಡುಪಿ ಜಿಲ್ಲಾಧಿಕಾರಿ ಹೆಸರಿನಲ್ಲೇ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿ!

Update: 2021-04-11 12:53 IST

ಉಡುಪಿ, ಎ.11: ಈವರೆಗೆ ಜನಸಾಮಾನ್ಯರು, ಗಣ್ಯರ ಫೇಸ್‌ಬುಕ್ ಖಾತೆ ಗಳನ್ನು ನಕಲಿ ಸೃಷ್ಟಿಸಿ ಅವರ ಆತ್ಮೀಯರ ಬಳಗದಲ್ಲಿ ಹಣ ಕಳುಹಿಸುವಂತೆ ಬೇಡಿಕೆ ಮುಂದಿಡುತ್ತಿದ್ದ ಖದೀಮರು, ಇದೀಗ ಉಡುಪಿ ಜಿಲ್ಲಾಧಿಕಾರಿಯವರ ಫೇಸ್‌ಬುಕ್ ಖಾತೆ ಯನ್ನೇ ನಕಲಿ ಮಾಡಿರುವುದು ಬೆಳಕಿಗೆ ಬಂದಿದೆ.

ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ವೈಯಕ್ತಿಕ ಫೇಸ್‌ಬುಕ್ ಖಾತೆಯಾಗಿರುವ ಜಿ.ಜಗದೀಶ್ ಮಲಲಗದ್ದೆ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಯನ್ನು ಸೃಷ್ಟಿಸಿ ಹಲವು ಮಂದಿಗೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಲಾಗಿದೆ. ಬಹುತೇಕ ಮಂದಿ ಇವರ ನಕಲಿ ಖಾತೆಯಲ್ಲಿ ಫ್ರೆಂಡ್ಸ್ ಆಗಿದ್ದಾರೆ. ನಂತರ ಖದೀಮರು ಈ ನಕಲಿ ಖಾತೆಯಲ್ಲಿ ಫ್ರೆಂಡ್ಸ್ ಆಗಿರುವವರಿಗೆ ಸಂದೇಶ ಕಳುಹಿಸಿ ತುರ್ತು ಹಣ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ. ಕೆಲವರಿಗೆ ಇದೊಂದು ನಕಲಿ ಖಾತೆ ಎಂಬುದು ತಿಳಿದು ಕೂಡಲೇ ಜಿಲ್ಲಾಧಿಕಾರಿಯ ಗಮನಕ್ಕೆ ತಂದಿದ್ದಾರೆ. ಅದರಂತೆ ಜಿಲ್ಲಾಧಿಕಾರಿ ಜಿ.ಜಗದೀಶ್, ತನ್ನ ಫೇಸ್ ಬುಕ್‌ನಲ್ಲಿ ಈ ನಕಲಿ ಖಾತೆ ಹಾಗೂ ಫ್ರೆಂಡ್‌ ಗಳಿಗೆ ಕಳುಹಿಸಿರುವ ಸಂದೇಶದ ಸ್ಕ್ರೀನ್‌ಶಾಟ್‌ಗಳನ್ನು ಹಾಕಿ, ನನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿ ಮಾಡಿದ್ದಾರೆ. ಇದರ ಬಗ್ಗೆ ನಾನು ದೂರು ನೀಡಿದ್ದೇನೆ. ಯಾರು ಹಣ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

''ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ದೂರು ನೀಡಿದ್ದು, ಅದನ್ನು ಸೆನ್ ಅಪರಾಧ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಅದರಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮುಂದೆ ಫೇಸ್‌ಬುಕ್‌ಗೆ ಪತ್ರ ಬರೆದು ನಕಲಿ ಖಾತೆಯನ್ನು ಡಿಲೀಟ್ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು''.

-ವಿಷ್ಣುವರ್ಧನ್, ಎಸ್ಪಿ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News