ಪೆರ್ಡೂರು: ನೂತನ ಶಿಲಾಯುಗ, 16-17ನೆ ಶತಮಾನದ ಪ್ರಾಚ್ಯವಶೇಷಗಳು ಪತ್ತೆ

Update: 2021-04-11 15:45 GMT

ಪೆರ್ಡೂರು, ಎ.11: ಪೆರ್ಡೂರು ಗ್ರಾಮದ ಮಠದ ಮೂಲೆ ಪ್ರದೇಶದಲ್ಲಿ ನೂತನ ಶಿಲಾಯುಗಕ್ಕೆ ಸಂಬಂಧಿಸಿದ ರಿಂಗ್ ಸ್ಟೋನ್ (ಉಂಗುರಾಕೃತಿಯ ಕಲ್ಲು) ಹಾಗೂ ಸುಮಾರು 16-17ನೇ ಶತಮಾನಕ್ಕೆ ಸೇರಿದ ಕೋಟೆಯ ಪ್ರಾಚ್ಯವಶೇಷಗಳನ್ನು ಯು.ಕಮಲಬಾಯಿ ಪ್ರೌಢ ಶಾಲೆಯ ನಿವೃತ್ತ ಅಧ್ಯಾಪಕ ಕೆ.ಶ್ರೀಧರ್ ಭಟ್ ಹಾಗೂ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಪತ್ತೆ ಮಾಡಿದ್ದಾರೆ.

ನೂತನ ಶಿಲಾಯುಗಕ್ಕೆ ಸೇರಿದ ರಿಂಗ್ ಸ್ಟೋನ್ 10 ಸೆಂ.ಮೀ ವ್ಯಾಸವನ್ನು ಹೊಂದಿದ್ದು, ಇದನ್ನು ಕ್ರಿ.ಪೂ. 3000 ವರ್ಷಗಳ ಹಿಂದೆ ಆಹಾರ ಸಂಬಂಧಿ ಉಪಕರಣವಾಗಿ ಬಳಸುತ್ತಿದ್ದರೆಂದು ಸಂಶೋಧನಾರ್ಥಿಗಳು ಅಭಿಪ್ರಾಯ ಪಟ್ಟಿದ್ದಾರೆ. ಮಠದ ಮೂಲೆ ಪ್ರದೇಶದಲ್ಲಿ ಕೋಟೆಯ ಅವಶೇಷಗಳಾದ ಕಾವಲು ಗೋಪುರ, ಪ್ರಾಕಾರ ಗೋಡೆ ಹಾಗೂ ಸ್ಥಳೀಯ ಕಲ್ಲುಗಳನ್ನು ಬಳಸಿ ನಿರ್ಮಿಸಲ್ಪಟ್ಟ ಸುಮಾರು 8 ಬಾವಿಗಳನ್ನು ಪತ್ತೆ ಮಾಡಲಾಗಿದೆ.

ಸ್ಥಳೀಯರು ಇದನ್ನು ದೇವಾಲಯದ ಕುರುಹುಗಳೆಂದು ಭಾವಿಸಿರುತ್ತಾರೆ. ಆದರೆ ಈ ಪ್ರಾಚ್ಯವಶೇಷಗಳು ಕೋಟೆಯ ಒಂದು ಪ್ರಕಾರವಾದ ಜಲದುರ್ಗ ವನ್ನು ಹೋಲುತ್ತದೆ. ಮಾತ್ರವಲ್ಲದೇ ಇಲ್ಲಿ ಭಗ್ನಗೊಂಡ ನಾಗ ಶಿಲ್ಪಗಳು, ಕುಳಿಗಳು ಪತ್ತೆಯಾಗಿವೆ. ಹಾಗಾಗಿ ಇಲ್ಲಿ ದೊರೆತ ಪ್ರಾಚ್ಯವಶೇಷಗಳ ಹಿನ್ನೆಲೆ ಯನ್ನು ಗಮನಿಸಿ ಈ ಪ್ರದೇಶದ ಇತಿಹಾಸವು ಸುಮಾರು ಕ್ರಿ.ಪೂ.3000 ವರ್ಷ ಗಳಷ್ಟು ಪ್ರಾಚೀನವೆಂದು ಸಂಶೋಧನಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಸ್ಥಳೀಯರಾದ ನಾರಾಯಣ ಕುಲಾಲ್, ಜಯ ಕುಲಾಲ್, ಸತೀಶ್ ನಾಯ್ಕ್, ವಿಠ್ಠಲ ನಾಯ್ಕ್ ಅವರು ಸಹಕಾರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News