×
Ad

ಹೆದ್ದಾರಿ ದರೋಡೆ, ಕೊಲೆ ಸಂಚು ಪ್ರಕರಣ; ಟಿಬಿ ಗ್ಯಾಂಗ್‌ನ 8 ಆರೋಪಿಗಳು ವಶಕ್ಕೆ: ಕಮಿಷನರ್ ಶಶಿಕುಮಾರ್

Update: 2021-04-12 14:33 IST

ಮಂಗಳೂರು, ಎ.12: ನಗರ ಹಾಗೂ ದ.ಕ ಜಿಲ್ಲೆಯಲ್ಲಿ ಹೆದ್ದಾರಿ ದರೋಡೆ ಮಾಡಲು ಸಂಚು ರೂಪಿಸಿದ್ದ ತೌಸೀರ್ ಬಾಸಿತ್ (ಟಿಬಿ ಗ್ಯಾಂಗ್) ತಂಡದ 8 ಮಂದಿ ಆರೋಪಿಗಳನ್ನು ಬಂಧಿಸುವ ಮೂಲಕ ಹಣಕಾಸಿನ ವೈಷಮ್ಯದಲ್ಲಿ ನಡೆಯಬಹುದಾಗಿದ್ದ ಕೊಲೆ ಸಂಚನ್ನೂ ವಿಫಲಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಇಂದು ಮುಂಜಾನೆಯ ವೇಳೆ ಕೊರೋನ ನೈಟ್ ಕರ್ಫ್ಯೂನಲ್ಲಿದ್ದಾಗ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಲಾಯಿಬೆಟ್ಟು ಗ್ರಾಮದ ಪರಾರಿ ಎಂಬಲ್ಲಿ ಮಾರಕಾಯುಧಗಳಿಂದ ಕೂಡಿದ್ದ ಇನ್ನೋವಾ ಕಾರಿನಲ್ಲಿ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಲು ಪ್ರಯತ್ನಿಸುತ್ತಿದ್ದ ತಂಡವನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ವಶಕ್ಕೆ ಪಡೆಯಲಾದ ಆರೋಪಿಗಳನ್ನು ಬಜಾಲ್ ಪಡ್ಪು ನಿವಾಸಿ ತೌಸೀರ್ ಯಾನೆ ಪತ್ತೊಂಜಿ ತೌಸಿರ್ (26), ಫರಂಗಿಪೇಟೆಯ ಮುಹಮ್ಮದ್ ಅರಾಫತ್ ಯಾನೆ ಅರಫಾ (29), ಬಂಟ್ವಾಳ ಅಮ್ಮೆಮಾರ್‌ನ ತಸ್ಲಿಂ (27), ತುಂಬೆ ಹೌಸ್‌ನ ನಾಸಿರ್ ಹುಸೇನ್ (29), ಪುದು ಗ್ರಾಮದ ಮುಹಮ್ಮದ್ ರಫೀಕ್ (37), ಮುಹಮ್ಮದ್ ಸಫ್ವಾನ್ (25), ಮುಹಮ್ಮದ್ ಝೈನುದ್ದೀನ್ (24), ಉನೈಝ್ ಯಾನೆ ಮುಹಮ್ಮದ್ ಉನೈಝ್ (26) ಎಂದು ಅವರು ಹೇಳಿದರು.

ಆರೋಪಿಗಳಿಂದ ತಲಾ ಎರಡರಂತೆ ತಲವಾರು, ಚೂರಿ, ಒಂದು ಡ್ರಾಗ್ ಚೂರಿ, 8 ಮೊಬೈಲ್ ಫೋನ್‌ಗಳು, 5 ಮಂಕಿ ಕ್ಯಾಪ್, 3 ಮೆಣಸಿನ ಹುಡಿ ಪ್ಯಾಕೆಟ್, ಇನ್ನೋವಾ ಕಾರು ಸೇರಿ ಒಟ್ಟು 10.89 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿದೇಶದಲ್ಲಿರುವ ಬಾತಿಶ್ ಯಾನೆ ಬಾಶಿತ್ ಎಂಬಾತನ ಸೂಚನೆಯಂತೆ ಮಂಗಳೂರಿನ ಹಲವಾರು ವ್ಯಕ್ತಿಗಳ ಹಣಕಾಸಿನ ವ್ಯವಹಾರದ ಸೆಟ್ಲ್‌ಮೆಂಟನ್ನು ತೌಸಿರ್ ಯಾನೆ ತೌಸಿ ಹಾಗೂ ಇತರರು ಮಾಡುತ್ತಿದ್ದರು ಎಂದವರು ಹೇಳಿದರು.

ಹಣಕಾಸಿನ ಸೆಟ್ಲ್‌ಮೆಂಟ್ ವ್ಯವಹಾರ ನಡೆಸುತ್ತಿದ್ದ ಈ ಗ್ಯಾಂಗ್, ಬಿ.ಸಿ.ರೋಡ್ ಮೆಲ್ಕಾರ್ ಮೂಲಕ ಪ್ರಸ್ತುತ ಬೆಂಗಳೂರಿನಲ್ಲಿ ವ್ಯವಹಾರ ಮಾಡುತ್ತಿರುವ ಜಾವಿದ್ ಎಂಬಾತನಿಗೆ ತೌಸಿರ್ ಗ್ಯಾಂಗ್‌ನ ಸಫ್ವಾನ್ ಎಂಬಾತ 12 ಲಕ್ಷ ರೂ. ವ್ಯವಹಾರಕ್ಕಾಗಿ ನೀಡಿದ್ದು, ಇದನ್ನು ನೀಡದಿದ್ದಾಗ ಝಿಯಾದ್‌ನನ್ನು ಬೆಂಗಳೂರಿನಿಂದ ಕಿಡ್ನಾಪ್ ಮಾಡಿ ಕೊಲೆ ಮಾಡಲು ಗ್ಯಾಂಗ್ ಸಂಚು ರೂಪಿಸಿತ್ತು. ಅದರಂತೆ ಬೆಂಗಳೂರಿಗೆ ಹೋಗಿ ಅಲ್ಲಿ ಅವರಿಗೆ ಜಾವಿದ್ ಸಿಗದೇ ಇದ್ದಾಗ ವಾಪಾಸು ಮಂಗಳೂರಿಗೆ ಬಂದು ಹೆದ್ದಾರಿ ದರೋಡೆಗೆ ಹೊಂಚು ಹಾಕಿದ್ದರು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.

2020ರಲ್ಲಿ ಈ ಆರೋಪಿತರ ಪೈಕಿ ತೌಸಿರ್ ಯಾನೆ ತೌಸಿ ಮತ್ತು ತಸ್ಲಿಂ ಎಂಬವರು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ದರೋಡೆಗೆ ವಿಫಲ ಯತ್ನ ನಡೆಸಿದ್ದು, ಆ ಮನೆಯಲ್ಲಿದ ಸಾಕು ನಾಯಿಯನ್ನು ತಲವಾರಿನಿಂದ ಕಡಿದು ಹಾಕಿದ್ದರು. ತೌಸಿರ್ ವಿರುದ್ಧ ಈಗಾಗಲೇ ಕೊಲೆಯತ್ನ, ದರೋಡೆ, ಹಲ್ಲೆಗೆ ಸಂಬಂಧಿಸಿ 6 ಪ್ರಕರಣಗಳು ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಧರ್ಮಸ್ಥಳದಲ್ಲಿ ದಾಖಲಾದ ದರೋಡೆ ಯತ್ನ ಪ್ರಕರಣದಲ್ಲಿ ಈತ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದ. ಆರೋಪಿಗಳ ಪೈಕಿ ತಸ್ಲಿಂ ಎಂಬಾತ 2017ರಲ್ಲಿ ಫರಂಗಿಪೇಟೆಯಲ್ಲಿ ನಡೆದ ಝಿಯಾ ಯಾನೆ ರಿಯಾಸ್ ಮತ್ತು ಫಯಾಸ್ ಎಂಬವರ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಇತರ 12 ಪ್ರಕರಣಗಳಲ್ಲಿ ಈತ ಭಾಗಿ ಎಂದು ಪೊಲೀಸ್ ಕಮಿಷನರ್ ವಿವರಿಸಿದರು.

ಈ ಗ್ಯಾಂಗ್‌ನ ಇನ್ನಷ್ಟು ಆರೋಪಿಗಳು ಪತ್ತೆಯಾಗಬೇಕಿದ್ದು, ತನಿಖೆ ಮುಂದುವರಿದಿದೆ ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್, ಎಸಿಪಿ ರಂಜಿತ್ ಬಂಡಾರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News