ರಫೇಲ್ ಭ್ರಷ್ಟಾಚಾರ ಹೊಸ ಆರೋಪಗಳ ಕುರಿತ ಪಿಐಎಲ್: ಎರಡು ವಾರಗಳ ನಂತರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಹೊಸ ಆರೋಪದ ಕುರಿತಾದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ಎರಡು ವಾರಗಳ ನಂತರ ವಿಚಾರಣೆ ನಡೆಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅಪೀಲುದಾರರಿಗೆ ತಿಳಿಸಿದ್ದಾರೆ.
ಭಾರತೀಯ ಮಧ್ಯವರ್ತಿಯೊಬ್ಬರಿಗೆ ಫ್ರಾನ್ಸ್ ದೇಶದ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ 1.1 ಮಿಲಿಯನ್ ಯುರೋಸ್ ಪಾವತಿಸಿದೆ ಎಂದು ಫ್ರಾನ್ಸ್‍ನ ಮೀಡಿಯಾಪಾರ್ಟ್ ಡಿಜಿಟಲ್ ಸುದ್ದಿ ತಾಣ ಇತ್ತೀಚೆಗೆ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ಕುರಿತು ಸ್ವತಂತ್ರ ತನಿಖೆಗೆ ಕೋರಿ ಎಂ ಎಲ್ ಶರ್ಮ ಎಂಬ ವಕೀಲರು ಸುಪ್ರೀಂ ಕೋರ್ಟಿಗೆ ಪಿಐಎಲ್ ಸಲ್ಲಿಸಿದ್ದರು.
ಡಸ್ಸಾಲ್ಟ್ ಸಂಸ್ಥೆಯು ಭಾರತದ ಸುಶೇನ್ ಗುಪ್ತಾ ಅವರು ನಡೆಸುವ ಡೆಫ್ಸಿಸ್ ಸೊಲ್ಯೂಶನ್ಸ್ ಎಂಬ ಕಂಪೆನಿಗೆ ರಫೇಲ್ ವಿಮಾನದ 50 ಮಾದರಿಗಳನ್ನು `ಉಡುಗೊರೆ'ಗಳಾಗಿ ನೀಡುವ ಉದ್ದೇಶದಿಂದ ಸಿದ್ಧಪಡಿಸಲು 1.1 ಮಿಲಿಯನ್ ಯುರೋಸ್ ನೀಡಿತ್ತು ಎಂದು ಫ್ರಾನ್ಸ್ ದೇಶದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ತನಿಖಾ ವರದಿಯನ್ನಾಧರಿಸಿ ಮೀಡಿಯಾಪಾರ್ಟ್ ಇತ್ತೀಚೆಗೆ ಪ್ರಕಟಿಸಿದ್ದ ವರದಿಯಲ್ಲಿ ಹೇಳಲಾಗಿದೆ. ಸುಶೇನ್ ಗುಪ್ತಾ ಈಗಾಗಲೇ ಆಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದಲ್ಲಿ ಆರೋಪಿಯಾಗಿದ್ದು ಒಮ್ಮೆ ಬಂಧನಕ್ಕೀಡಾಗಿ ಪ್ರಸ್ತುತ ಜಾಮೀನಿನ ಮೇಲಿದ್ದಾರೆ. ಆದರೆ ಡೆಫ್ಸಿಸ್ ಈಗಾಗಲೇ ಆರೋಪಗಳು ನಿರಾಧಾರ ಎಂದು ಹೇಳಿ ಅವುಗಳನ್ನು ಅಲ್ಲಗಳೆದಿದೆ.