ಪ್ರವಾಸೋದ್ಯಮ ತಾಣವಾಗಿ ಮಣ್ಣಪಳ್ಳ ಅಭಿವೃಧಿಗೆ ಯೋಜನೆ: ಶಾಸಕ ರಘುಪತಿ ಭಟ್
ಉಡುಪಿ, ಎ.12: ಮಣಿಪಾಲದ ಮಣ್ಣಪಳ್ಳವನ್ನು ಪ್ರವಾಸೋದ್ಯಮ ತಾಣ ವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಪ್ರಿಲ್ ಮೇ ತಿಂಗಳಲ್ಲಿಯೂ ನೀರು ತುಂಬಿರುವಂತೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ಇಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತ ನಾಡುತಿದ್ದರು.
ಸ್ವರ್ಣ ನದಿಗೆ ಕಲ್ಯಾಣಪುರ, ಕಿಳಂಜೆ, ಶಿಂಬ್ರಾಗಳಲ್ಲಿ ಉಪ್ಪು ನೀರಿನ ತಡೆ ಗೋಡೆ ನಿರ್ಮಿಸಿ, ಅಲ್ಲಿನ ಸಿಹಿ ನೀರನ್ನು ಏತ ನೀರಾವರಿ ಮೂಲಕ ಮಣ್ಣಪಳ್ಳ ಕೆರೆಗೆ ಹಾಯಿಸುವ 165 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಇದರ ಡಿಪಿಆರ್ ಸಿದ್ಧವಾಗಿದ್ದು, ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆಯ ಬೇಕಾಗಿದೆ. ಇದರಿಂದ ಮಣ್ಣಪಳ್ಳ ಕೆರೆಯಲ್ಲಿ ವರ್ಷವೀಡಿ ನೀರಿದ್ದು, ಪ್ರವಾಸೋ ದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಬಹುದಾಗಿದೆ ಎಂದರು.
ಧಾರ್ಮಿಕ ಬ್ಯಾನರ್‌ಗಳಿಗೆ ರಿಯಾಯಿತಿ
ನಗರದಲ್ಲಿ ಆಳವಡಿಸಲಾಗುವ ಧಾರ್ಮಿಕ ಕಾರ್ಯಕ್ರಮದ ಬ್ಯಾನರ್‌ಗಳಿಗೆ ರಿಯಾಯಿತಿ ಶುಲ್ಕ ವಿಧಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದು ಕೊಳ್ಳಲಾಯಿತು. ರಾಜಕೀಯ, ಖಾಸಗಿ ಬ್ಯಾನರ್‌ಗಳಿಗೆ ಪ್ರತಿ ಚದರ ಅಡಿಗೆ 10 ರೂ. ಹಾಗೂ 15 ದಿನಗಳಿಗೆ 500ರೂ. ಮತ್ತು ಧಾರ್ಮಿಕ ಬ್ಯಾನರ್‌ಗಳಿಗೆ 100ರೂ. ಶುಲ್ಕ ವನ್ನು ನಿಗದಿಪಡಿಸಲಾಯಿತು. ಬ್ಯಾನರ್ ಆಳವಡಿಸಲು ಮೊದಲು ಇದ್ದ ಪೊಲೀಸ್ ಅನುಮತಿ ಕ್ರಮವನ್ನು ರದ್ದುಪಡಿಸಿ, ಕೇವಲ ನಗರಸಭೆಯಿಂದ ಮಾತ್ರ ಅನುಮತಿ ಪಡೆಯುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.
ಉಡುಪಿ ನಗರದ ಕಲ್ಸಂಕ ವೃತ್ತಕ್ಕೆ ಮಧ್ವಾಚಾರ್ಯ, ಬನ್ನಂಜೆ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಸೇರಿದಂತೆ ವಿವಿಧ ವೃತ್ತಗಳಿಗೆ ವಾದಿರಾಜ ಆಚಾರ್ಯ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನು ನಾಮಕರಣ ಮಾಡು ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಅಧಿಕಾರಿಗಳ ನೇಮಕಕ್ಕೆ ಕ್ರಮ
ನಗರಸಭೆಯಲ್ಲಿ ಕೆಲವೊಂದು ಅಧಿಕಾರಿಗಳ ಹುದ್ದೆ ಖಾಲಿ ಇದ್ದು, ಇದ ರಿಂದ ಜನಸಾಮಾನ್ಯರಿಗೆ ಸೇವೆ ಒದಗಿಸಲು ಕಷ್ಟ ಆಗುತ್ತದೆ ಎಂದು ರಮೇಶ್ ಕಾಂಚನ್ ಸಭೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಸದ್ಯ ನಗರಸಭೆ ಪರಿಸರ ಇಂಜಿನಿಯರ್, ಆರೋಗ್ಯ ಅಧಿಕಾರಿ ಗಳ ಕೊರತೆ ಇದ್ದು, ಒಳಚರಂಡಿ ಹಾಗೂ ನೀರಿಗೆ ಪ್ರತ್ಯೇಕ ಇಂಜಿನಿಯರ್‌ಗಳ ಅವಶ್ಯಕತೆ ಇದೆ. ಈ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಗರದಲ್ಲಿ ವಾರಾಹಿ ಪೈಪ್‌ಲೈನ್ ಕಾಮಗಾರಿಯಿಂದಾಗಿ ಹಿಂದಿನ ಲೈನ್ ತುಂಡಾಗಿರುವುದರಿಂದ ಪೆರಂಪಳ್ಳಿ, ಕೊಳಂಬೆ ಸೇರಿದಂತೆ ನಗರದ ವಿವಿಧ ಭಾಗಗಳ ಹಲವು ಮನೆಗಳಿಗೆ 10-15 ದಿನಗಳಿಂದ ನೀರು ಬರುತ್ತಿಲ್ಲ ಎಂದು ಸದಸ್ಯರಾದ ಸೆಲಿನಾ ಕರ್ಕಡ, ರಮೇಶ್ ಕಾಂಚನ್ ದೂರಿ ದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ರಾಜಶೇಖರ್, ಪೆರಂಪಳ್ಳಿಯಲ್ಲಿ ರಸ್ತೆ ಕಾಮಗಾರಿ ಯಿಂದ ಅಲ್ಲಿನ ಪೈಪ್ ಜೋಡಣೆ ಕೆಲಸ ವಿಳಂಬ ವಾಗಿದೆ. ಇಂದೇ ಪೈಪ್‌ಲೈನ್ ಸರಿಪಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಸೇನಾ ರ್ಯಾಲಿ ಬಗ್ಗೆ ವಾಗ್ವಾದ
ಸೇನಾ ನೇಮಕಾತಿ ರ್ಯಾಲಿಗೆ ಆಗಮಿಸಿದ ಅಭ್ಯರ್ಥಿಗಳಿಗೆ ಆಗಿರುವ ಸಮಸ್ಯೆ ಗಳ ಬಗ್ಗೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಸಭೆಯಲ್ಲಿ ಪ್ರಸ್ತಾಪಿಸಿ ದರು. ಇದರಿಂದ ವಾರ್ಡಿನ ಜನತೆಗೆ ತುಂಬಾ ಸಮಸ್ಯೆಗಳಾಗಿವೆ. ಈ ರ್ಯಾಲಿಯನ್ನು ನಿಬಾಯಿ ಸುವಲ್ಲಿ ನಗರಸಭೆ ಎಡವಿದೆ ಎಂದು ದೂರಿ ದರು. ಈ ವಿಚಾರದಲ್ಲಿ ಸದಸ್ಯರು ಗಳ ಮಧ್ಯೆ ವಾಗ್ವಾದಗಳು ನಡೆದವು.
ಬಳಿಕ ಮಾತನಾಡಿದ ರಘುಪತಿ ಭಟ್, ಜಿಲ್ಲಾಧಿಕಾರಿಗಳು ನಮ್ಮ ಗಮನಕ್ಕೆ ತಾರದೆಯೇ ಈ ಕಾರ್ಯಕ್ರಮ ಆಯೋಜಿಸಿರುವುದರಿಂದ ಸಮಸ್ಯೆ ಯಾಗಿದೆ. ಯಾವುದೇ ಪೂರ್ವತಯಾರಿ ಕೂಡ ಮಾಡಿರಲಿಲ್ಲ. ಕೊನೆಗೆ ಈ ವಿಚಾರ ನಮ್ಮ ಗಮನಕ್ಕೆ ಬಂದ ಕೂಡಲೇ ಸರಿಯಾದ ವ್ಯವಸ್ಥೆ ಮಾಡಿದ್ದೇವೆ ಎಂದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಡಾ. ಉದಯ ಶೆಟ್ಟಿ ಉಪಸ್ಥಿತರಿದ್ದರು.
ಮಣ್ಣಪಳ್ಳ ನಿರ್ವಹಣೆ ನಗರಸಭೆಗೆ
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯ ಅಧೀನದಲ್ಲಿರುವ ಮಣ್ಣಪಳ್ಳ ಮತ್ತು ಬೀಡಿನಗುಡ್ಡೆ ಕ್ರೀಡಾಂಗಣದ ನಿರ್ವಹಣೆ ಜವಾಬ್ದಾರಿಯನ್ನು ನಗರ ಸಭೆಗೆ ಹಸ್ತಾಂತರಿಸಬೇಕೆಂದು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಇದರೊಂದಿಗೆ ಮಲ್ಪೆ ಬೀಚ್‌ನ ಜವಾಬ್ದಾರಿ ಕೂಡ ನಗರಸಭೆಗೆ ನೀಡಬೇಕು ಎಂಬ ಒತ್ತಾಯ ಕೇಳಿಬಂತು. ಬೀಚ್ ಅಭಿವೃದ್ಧಿ ಹೆಸರಿನಲ್ಲಿ ಗುತ್ತಿಗೆದಾ ರೊಬ್ಬರೇ ಹಣ ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂು ರಮೇಶ್ ಕಾಂಚನ್ ಹೇಳಿದರು.
400 ಹೊಸ ಮನೆಗಳು ಮಂಜೂರು
ನಿವೇಶನ ರಹಿತರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆಯಡಿ ಮತ್ತೆ 400 ಮನೆಗಳು ಮಂಜೂರಾಗಿದ್ದು, ಹೊಸ ತಂತ್ರಜ್ಞಾನದೊಂದಿಗೆ ಇವುಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಇದಕ್ಕೆ ಅರ್ಹ ಫಲಾನುಭವಿಗಳ ಹೆಸರು ಸೂಚಿಸುವಂತೆ ಶಾಸಕ ಕೆ.ರಘುಪತಿ ಭಟ್ ಸದಸ್ಯರಿಗೆ ತಿಳಿಸಿದರು.
ಈ ಹಿಂದೆ ಒಟ್ಟು 460 ಮನೆಗಳು ಮಂಜೂರಾಗಿದ್ದು, ಅದರಲ್ಲಿ 90ಸಾವಿರ ರೂ. ಹಣ ಪಾವತಿಸಿದ್ದ 240 ಮನೆಗಳ ಕಾಮಗಾರಿ ನಡೆಯುತ್ತಿದೆ. ಈ ಮನೆ ಗಳನ್ನು ನವೆಂಬರ್ ತಿಂಗಳಲ್ಲಿ ಹಸ್ತಾಂತರಿಸಲಾಗುವುದು. ಉಳಿದ ಮನೆಗಳ ಕಾಮಗಾರಿಯನ್ನು ತಾತ್ಕಾಲಿವಾಗಿ ಸ್ಥಗಿತಗೊಳಿಸಲಾಗಿದೆ ಎಂದರು.