ಅಲ್ಪಸಂಖ್ಯಾತರಿಂದ ಬಿಜೆಪಿಯತ್ತ ಒಲವು: ಕೆನಡಿ ಶಾಂತಕುಮಾರ್
ಮಂಗಳೂರು, ಎ.12: ಬಿಜೆಪಿಯ ನಿಜವಾದ ಅಲ್ಪಸಂಖ್ಯಾತ ಪರ ಕಾಳಜಿಯನ್ನು ನೋಡಿ ಅಲ್ಪಸಂಖ್ಯಾತರು ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆ ಎಂದು ಅಲ್ಪ ಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ, ದ.ಕ., ಉಡುಪಿ ಮತ್ತು ಕೊಡಗು ಜಿಲ್ಲಾ ಪ್ರಭಾರಿ ಕೆನಡಿ ಶಾಂತಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿರುವ ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಇದುವರೆಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ದಾರಿತಪ್ಪಿಸುತ್ತಿತ್ತು. ಇದರ ಅರಿವು ಈಗ ಎಲ್ಲರಿಗೂ ಆಗಿದೆ ಎಂದರು.
ಬಿಜೆಪಿ ಸರಕಾರ ಈ ಬಾರಿ ಬಜೆಟ್‌ನಲ್ಲಿ 1500 ಕೋಟಿ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿರಿಸಿದೆ. ಆದರೆ ಕಾಂಗ್ರೆಸ್ ಕೇವಲ 46 ಕೋಟಿ ಅನುದಾನ ಒದಗಿಸಿತ್ತು. ರಾಜಕೀಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕ್ರಿಶ್ಚಿಯನ್ ಅಭಿವೃದ್ಧಿ ಸಂಸ್ಥೆಗಾಗಿ 200 ಕೋಟಿಯನ್ನು ಬಿಜೆಪಿ ಮೀಸಲಿರಿಸಿದೆ. ಇವೆಲ್ಲವನ್ನು ಗಮನಿಸಿರುವ ಅಲ್ಪಸಂಖ್ಯಾತರಿಗೆ ಯಾರು ತಮ್ಮ ಮೇಲೆ ಕಾಳಜಿ ವಹಿಸುವವರು ಎಂಬುದರ ಅರಿವಾಗಿದೆ ಎಂದು ಶಾಂತಕುಮಾರ್ ಹೇಳಿದರು.
ಅಲ್ಪಸಂಖ್ಯಾತರನ್ನು ಸಂಘಟಿಸುವ ನೆಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ದಕ್ಷಣ ಕನ್ನಡದಲ್ಲೂ ಪ್ರವಾಸ ಕೈಗೊಂಡು ಪಕ್ಷ ಬಲಪಡಿಸಲು ಆದ್ಯತೆ ನೀಡುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ರಹೀಂ ಉಚ್ಚಿಲ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಮುಖಂಡರಾದ ಅಝೀಝ್ ಬೈಕಂಪಾಡಿ, ವಿಲ್ಫ್ರೇಡ್ ಸಲ್ದಾನ, ಸಲೀಂ ಅಂಬಾಗಿಲು, ಶನವಾಝ್, ಅಬ್ದುಲ್ ರಝಾಕ್, ಅಸ್ಗರ್ ಆಲಿ, ರಝಾಕ್ ತೋಕೂರು. ಮುತ್ತಲಿಬ್, ಜಮಾಲ್ ಕೆ. ಮತ್ತಿತರರು ಉಪಸ್ಥಿತರಿದ್ದರು.